ಆ. 13ಕ್ಕೆ ಗಾಣಿಗ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

ಕಲಬುರಗಿ,ಆ.10: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 13ರಂದು ಬೆಳಿಗ್ಗೆ 11 ಗಂಟೆಗೆ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ- 2023 ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ಕಲ್ಲೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಣಸಿರಿ ಸಹಕಾರ ಸಂಘಗಳ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಇ 90ಕ್ಕಿಂತ ಹೆಚಚು ಅಂಕಗಳನ್ನು ಪಡೆದಿರುವ ಜಿಲ್ಲಾ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಕಳೆದ 2008ನೇ ಸಾಲಿನಲ್ಲಿ ಗಾಣಿಗ ನೌಕರರ ಕಲ್ಯಾಣ ಸಂಘವು ಸ್ಥಾಪನೆಗೊಂಡಿದೆ. ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅವುಗಳಲ್ಲಿ ಪ್ರತಿಭಾ ಪುರಸ್ಕಾರವು ಒಂದಾಗಿದೆ. ಈ ಹಿಂದೆ ಜರುಗಿದ ಕಾರ್ಯಕ್ರಮಗಳಲ್ಲಿ 125ಕ್ಕಿಂತ ಹೆಚ್ಚು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಪ್ರತಿಭಾ ಪುರಸ್ಕಾರಕ್ಕಾಗಿ ಎಸ್‍ಎಸ್‍ಎಲ್‍ಸಿಯ 63 ಹಾಗೂ ಪಿಯುಸಿಯ 21 ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಆಸಕ್ತ ವಿದ್ಯಾರ್ಥಿಗಳು ಆಗಸ್ಟ್ 13ರಂದು ಕಾರ್ಯಕ್ರಮ ಆರಂಭವಾಗುವವರೆಗೂ ಅವಕಾಶವಿದೆ. ಒಂದು ವೇಳೆ ವಿದ್ಯಾರ್ಥಿಗಳು ಬೇರೆ ಊರುಗಳಲ್ಲಿ ಉನ್ನತ ಅಧ್ಯಯನಕ್ಕೆ ಹೋಗಿದ್ದರೂ ಅವರ ಪಾಲಕರು ಬಂದು ಗೌರವ ಪುರಸ್ಕಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಭಾ ಪುರಸ್ಕಾರಕ್ಕೆ ಪ್ರೋತ್ಸಾಹ ನೀಡಲು ಇಚ್ಛಿಸುವ ಕುಲ ಬಾಂಧವರು ಪದಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಅವರು ಕೋರಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಪುರದ ಗಾಣಿಗ ಸಮಾಜ ಗುರುಪೀಠದ ವನಶ್ರೀ ಸಂಸ್ಥಾನ ಮಠದ ಜಗದ್ಗುರು ಡಾ. ಜಯಬಸವಕುಮಾರ್ ಮಹಾಸ್ವಾಮಿಗಳು ವಹಿಸುವರು. ಬೀದರ್ ಜಿಲ್ಲೆಯ ಚಾಳಕಾಪುರದ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ್ ಸ್ವಾಮೀಜಿ ಉದ್ಘಾಟಿಸುವರು. ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬೇಲೂರಿನ ಶ್ರೀ ಗುರುಬಸವೇಶ್ವರ್ ಮಠದ ಡಾ. ಮಹಾಂತಲಿಂಗ ಮಹಾಸ್ವಾಮೀಜಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಡುವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ರುದ್ರಗೌಡ ಆರ್. ಬಿರಾದಾರ್ ಅವರು ವಿಶೇಷ ಉಪನ್ಯಾಸ ನೀಡುವರು. ಶ್ರೀ ಕೃಷ್ಣದೇವರಾಯ್ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಡಾ. ಸುರೇಶ್ ಆರ್. ಸಜ್ಜನ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದ 75 ವರ್ಷದ ಹಿರಿಯರನ್ನು ಗೌರವಿಸಲಾಗುವುದು. 2022-2023ನೇ ಸಾಲಿನಲ್ಲಿ ಡಾಕ್ಟರೇಟ್ ಪಡೆದ ಸಾಧಕರನ್ನೂ ಕೂಡ ಗೌರವಿಸಲಾಗುತ್ತದೆ. ಡಾ. ಗಿರಿಜಾ ಭೀ. ಗುಜಗೊಂಡ್ ಅವರು ಡಾಕ್ಟರೇಟ್ ಪಡೆದ ಕುರಿತು ಮಾಹಿತಿ ಬಂದಿದೆ. ಈ ಕುರಿತು ಮಾಹಿತಿ ನೀಡಲು ಆಗಸ್ಟ್ 13ರಂದು ಕಾರ್ಯಕ್ರಮ ಆರಂಭವಾಗುವವರೆಗೂ ಅವಕಾಶ ಕೊಡಲಾಗಿದೆ ಎಂದು ಅವರು ತಿಳಿಸಿದರು. ವೇದಿಕೆಯ ಮೇಲೆ ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಶರಣಕುಮಾರ್ ಬಿಲ್ಲಾಡ್, ರಾಜ್ಯ ಗಾಣಿಗ ನೌಕರರ ಸಂಘದ ಅಧ್ಯಕ್ಷ ಎಂ.ಡಿ. ಪಾಟೀಲ್, ಗಾಣಸಿರಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಣಾ ಅಧಿಕಾರಿ ನಿಂಗನಗೌಡ ಪಾಟೀಲ್ ಅವರು ಉಪಸ್ಥಿತರಿರುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಪಾಟೀಲ್, ರುದ್ರಗೌಡ ಪಾಟೀಲ್, ಶಂಕರಲಿಂಗ್ ಕಲಶೆಟ್ಟಿ, ಸಿದ್ದಣ್ಣ ಸಜ್ಜನ್ ಮುಂತಾದವರು ಉಪಸ್ಥಿತರಿದ್ದರು.