
ಯಾದಗಿರಿ, ಆ.7: ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಗೆ ಬರುವ ಗಣಪೂರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ಎರಡು ನೀರಿನ ಮೇಲ್ತೊಟ್ಟಿಗಳು ಇದುವರೆಗೆ ಉದ್ಘಾಟನೆ ಭಾಗ್ಯ ಕಾಣದೇ ಇರುವುದು ಏಕೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಪ್ರಶ್ನಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ನಂತರ ನೀಡಿದ ಹೇಳಿಕೆಯಲ್ಲಿ ಗಣಪೂರ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆಯೇ ಎರಡು ನೀರಿನ ಮೇಲ್ತೊಟ್ಟಿಗಳು ನಿರ್ಮಾಣಗೊಂಡು ಸಿದ್ದವಾಗಿವೆ. ಇದುವರೆಗೆ ಜನತೆಗೆ ಇದರ ಬಳಕೆ ಉಪಯೋಗ ಆಗಿಲ್ಲ ಆದರೆ ಇದುವರೆಗೆ ಉದ್ಘಾಟನೆ ಆಗಿಲ್ಲ. ಅಲ್ಲಲ್ಲಿ ಕಾಮಗಾರಿ ಕಳೆಪೆಯಾಗಿರುವುದು ಕಂಡುಬಂತು ಎಂದು ದೂರಿದ್ದಾರೆ.
ಕಳೆದ ಎರಡು ವರ್ಷಗಳಿಂದ ಗ್ರಾಪಂ, ತಾಪಂ, ಜಿಪಂ ಮತ್ತು ಜಿಲ್ಲಾಡಳಿತ ಭವನದಲ್ಲಿ ಶಾಸಕರ ಸಚಿವರ ಸಭೆಗಳು ನಡೆದರೂ ಸಹ ಈ ಸಮಸ್ಯೆ ಕುರಿತು ಏಕೆ ಚರ್ಚೆ ಆಗಲಿಲ್ಲ. ಎರಡು ಮೇಲ್ತೊಟ್ಟಿ ನಿರ್ಮಿಸಲು ಯಾರು ಮನವಿ ಮಾಡಿಕೊಂಡಿದ್ದರು. ಮತ್ತು ನಿರ್ಮಾಣ ಮಾಡಿದ ಉದ್ದೇಶವೇನು ಹಣ ಎಷ್ಟು ಬಂತು ಖರ್ಚಾಯಿತು, ಯಾರು ಲೂಟಿ ಮಾಡಿದರು ಎಂಬುದು ಮಾಹಿತಿ ಬೇಕು ಎಂದು ಅವರು ಆಗ್ರಹಿಸಿದರು.
ಈ ಹಿಂದಿನ ಜಿಲ್ಲಾಧಿಕಾರಿಗಳು, ಸಿಇಓ ಅವರು ತಾಪಂ ಇಓ, ಪಂಚಾಯಿತಿರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಜೆಇ, ಎಇಇ, ಇಇ ಪಸಪುಲ್ ಗ್ರಾಮ ಪಂಚಾಯಿತಿ ಪಿಡಿಓ ಮುಂತಾದವರ ಗಮನಕ್ಕೆ ತಂದರೂ ಸಹ ಇದನ್ನು ಸರಿಪಡಿಸದೇ ಗಾಢ ನಿದ್ರೆಗೆ ಜಾರಿದ ದಪ್ಪ ಚರ್ಮದ ಅಧಿಕಾರಿಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಣವಾಗಿದ್ದ ಈ ಮೇಲ್ತೊಟ್ಟಿಗಳನ್ನು ಸಾರ್ವಜನಿಕರ ಬಳಕೆ ಮಾಡುವುದು ಬಿಟ್ಟು ಅನಾನುಕೂಲ ಮಾಡಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಆಗಸ್ಟ್ 10ನೇ ತಾರೀಖಿನ ಒಳಗಾಗಿ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಮೇಲ್ನೊಟಕ್ಕೆ ಕಳಪೆ ಕಾಮಗಾರಿ ಆಗಿರುವುದು ಕಂಡು ಬರುತ್ತಿದೆ. ಆದ್ದರಿಂದ ತಕ್ಷಣ ತಂಡ ರಚಿಸಿ ತನಿಖೆ ಮಾಡಬೇಕು ಕಲುಷಿತ ನೀರಿನಿಂದ ಸಾಕಷ್ಟು ಸಾವು ನೋವು ಪ್ರಕರಣ ವರದಿಯಾಗುತ್ತಿವೆ. ಆದ್ದರಿಂದ ಈ ಮೇಲ್ತೊಟ್ಟಿಗಳನ್ನು ತಕ್ಷಣ ಜನಬಳಕೆಗೆ ಆರಂಭಿಸಬೇಕು ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಗ್ರಾಮಸ್ಥರು ಉಪಸ್ಥಿತರಿದ್ದರು.