ಆ. 02 ರಂದು ಬಸವ ಪಂಚಮಿ ಆಚರಣೆಗೆ ಕರೆ

ಬೀದರ:ಜು.31:ಬಸವಾನುಯಾಯಿಗಳು ನಾಗರ ಪಂಚಮಿಯ ಬದಲು ಬಸವ ಪಂಚಮಿ ಆಚರಿಸಬೇಕೆಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿಯವರು ಹೇಳಿದ್ದಾರೆ.
12ನೇ ಶತಮಾನದಲ್ಲಿಯೇ ಮಹಾಮಾನವತಾವಾದಿ ಬಸವಣ್ಣನವರು ಮೌಢ್ಯತೆಯ ಆಚರಣೆ ಸರಿಯಲ್ಲವೆಂದು ಸಾರಿ, ಸಹಜ, ಸರಳ ಆಚರಣೆಗಳನ್ನು ನೆಲೆಗೊಳಿಸಿದರು. ಮುಗ್ದ ಜನರನ್ನು ಮೂಢಾ ಆಚರಣೆಗಳ ಶೋಷಣೆಯಿಂದ ಮುಕ್ತಗೊಳಿಸಿದರು. ಅವರು ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಆದರೂ ಇಂದಿಗೂ ಮೂಢ ಆಚರಣೆಗಳು ಮರೆಯಾಗಿಲ್ಲ. ಆದ್ದರಿಂದ ಜನರಲ್ಲಿ ಮೌಢ್ಯತೆ ವಿರುದ್ದ ಜಾಗೃತಿ ಮೂಡಿಸಲು ಪ್ರತಿ ವರ್ಷವೂ ಬಸವಣ್ಣನವರ ಲಿಂಗೈಕ್ಯ ದಿನವಾದ ಶ್ರಾವಣ ಶುದ್ಧ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಲಿಂಗಾಯತ ಮಹಾಮಠದಿಂದ ಆಚರಿಸುತ್ತಾ, ಸಮಾಜದಲ್ಲಿ ಅರಿವು ಮೂಡಿಸಲಾಗುತ್ತಿದೆ. ಮೂಢಾಚಾರ, ಕಂದಾಚಾರಗಳನ್ನು ನಿರ್ಮೂಲನೆಗೊಳಿವುದು ಇದರ ಉದ್ದೇಶವಾಗಿದೆ. ಈ ವರ್ಷದ ಬಸವ ಪಂಚಮಿಯು ಆಗಸ್ಟ್ 02 ರಂದು ಒದಗಿಬಂದಿದ್ದು, ಅಂದು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅಲಂಕರಿಸಿ ಪೂಜೆ, ಪ್ರಾರ್ಥನೆ ಗೈಯಬೇಕು. ಬಸವಾದಿ ಶರಣರ ವಚನಗಳನ್ನು ಸಾಮೂಹಿಕವಾಗಿ ಓದಬೇಕು. ಅಂದು ಹಾವಿಗೆ ಹಾಲೆರೆಯುವ ಬದಲು ಬಡವರಿಗೆ, ಮಕ್ಕಳಿಗೆ, ಅಶಕ್ತರಿಗೆ ಮತ್ತು ದಿವ್ಯಾಂಗರಿಗೆ ಹಾಲು ಹಂಚುವ ಮೂಲಕ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ದಿಶೆಯಲ್ಲಿ ತಮ್ಮ ಸುತ್ತ ಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ಮತ್ತು ತಮ್ಮ ತಮ್ಮ ಶಕ್ತ್ಯಾನುಸಾರ ದಾಸೋಹ ಗೈಯಬೇಕೆಂದು ಅವರು ಕರೆ ನೀಡಿದ್ದಾರೆ.