ಆ.01ರಂದು ಭಾರತ ಮಾತಾ ಪೂಜಾ ಮಹೋತ್ಸವ ಕಾರ್ಯಕ್ರಮ

ಕೆ.ಆರ್.ಪೇಟೆ: ಜು.18:- ಭಾರತ ಸ್ವಾತ್ಯಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಆಗಸ್ಟ್ 01 ರಂದು ಭಾರತ ಮಾತಾ ಪೂಜಾ ಮಹೋತ್ಸವ ಕಾರ್ಯಕ್ರಮಗಳನ್ನು ಆಚರಿಸಲಾಗುವುದೆಂದು ಅಖಿಲ ಭಾರತೀಯ ಶೈಕ್ಷಣಿಕ ಮಂಚ್‍ನ ಸಹಸಂಘಟನೆಯಾದ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಸಹ ಪ್ರಧಾನ ಕಾರ್ಯದರ್ಶಿ ಗಂಗಾಧರಚಾರಿ ತಿಳಿಸಿದ್ದಾರೆ.
ಪಟ್ಟಣದ ಪ್ರಗತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಅಖಿಲ ಭಾರತೀಯ ಶೈಕ್ಷಣಿಕ ಮಂಚ್ ವತಿಯಿಂದ ಆಗಸ್ಟ್ 01 ರಂದು ನಡೆಯಲಿರುವ ಆಜಾದಿ ಅಮೃತ ಮಹೋತ್ಸವ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು.
ದೇಶಕ್ಕೆ ಸ್ವಾತ್ಯಂತ್ರ ಬಂದು ಆಗಸ್ಟ್ 15 ಕ್ಕೆ 75 ವರ್ಷಗಳು ತುಂಬುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಶೈಕ್ಷಣಿಕ ಮಂಚ್ ವತಿಯಿಂದ ದೇಶದಾದ್ಯಂತ ಲಕ್ಷಾಂತರ ಸಾಲಾ ಕಾಲೇಜುಗಳಲ್ಲಿ ಆಜಾದಿ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 01 ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಗರ್ಜಿಸಿದ ಹಿರಿಯ ಸ್ವಾತ್ಯಂತ್ರ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಪುಣ್ಯಸ್ಮರಣಾ ದಿನ. ಬಾಲಗಂಗಾಧರ ತಿಲಕ್ ಅವರ ಪುಣ್ಯಸ್ಮರಣೆಯ ಜೊತೆಗೆ ಸ್ವಾತ್ಯಂತ್ರ್ಯಕ್ಕಾಗಿ ಹೋರಾಡಿದ ಮತ್ತು ಬಲಿದಾನ ಮಾಡಿದ ನಾಯಕರನ್ನು ಸ್ಮರಣೆ ಮಾಡಲಾಗುವುದು. ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಿ ನಮ್ಮ ಮಕ್ಕಳಿಗೆ ರಾಷ್ಟ್ರಭಕ್ತಿ ತುಂಬುವ ಕೆಲಸ ಮಾಡಲಾಗುವುದು. ಸ್ವಾತ್ಯಂತ್ರದ ಮಣಲ್ಯವನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಇದಕ್ಕಾಗಿ ನಮ್ಮ ಶೈಕ್ಷಣಿಕ ಮಂಚ್ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ, ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ಸಂಕಲ್ಪ ದಿನ, ಗುರುವಂದನೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ನಮ್ಮದು ರಾಜಕೀಯ ಕಾರ್ಯಕ್ರಮವಲ್ಲ. ಬದಲಾಗಿ ರಾಷ್ಟ್ರೀಯತೆಯನ್ನು ಭಿತ್ತರಿಸಿ ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸುವುದು ನಮ್ಮ ಮುಖ್ಯ ಗುರಿ. ರಾಷ್ಟ್ರ ನಮ್ಮದು ಎನ್ನುವ ಭಾವನೆಯನ್ನು ಮಕ್ಕಳಲ್ಲಿ ತುಂಬುವ ಕೆಲಸವಾಗಬೇಕಾಗಿದೆ. ಇದಕ್ಕಾಗಿ ವಿಶಿಷ್ಠ ರೀತಿಯ ಕಾರ್ಯಕ್ರಮ ನಡೆಸುತ್ತಿದ್ದೇವೆ. ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷಕ ವೃಂದವನ್ನು ಸಂಪರ್ಕಿಸಿದ್ದು ರಾಷ್ಟ್ರದಾದ್ಯಂತ ಲಕ್ಷ ಲಕ್ಷ ವಿದ್ಯಾರ್ಥಿಗಳು ಭಾರತ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗುಳ್ಳಲಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ 250 ಕ್ಕೂ ಹೆಚ್ಚು ಶಾಲೆಗಳಲ್ಲಿ ಆಗಸ್ಟ್ 01 ರಂದು ಭಾರತ ಮಾತಾ ಪೂಜಾ ಮಹೋತ್ಸವ ಮತ್ತು ಸಂಕಲ್ಪ ಕಾರ್ಯಕ್ರಮ ನಡೆಯಲಿದೆ ಎಂದು ಗಂಗಾಧರಚಾರಿ ತಿಳಿಸಿದರು.