ಆ.೬:ರಾಜ್ಯ ಮಟ್ಟದ ಕನ್ನಡ ಸಿರಿವಂತಿಕೆ ಸಂಭ್ರಮ,ಪ್ರಶಸ್ತಿ ಪ್ರದಾನ

ರಾಯಚೂರು,ಆ.೪- ಬೆಳಕು ಟ್ರಸ್ಟ್ ಹಾಗೂ ಮಾನವ ಹಕ್ಕುಗಳ ಹಿತ ರಕ್ಷಣಾ ವೇದಿಕೆ ವತಿಯಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕನ್ನಡ ಸಿರಿವಂತಿಕೆ ಸಂಭ್ರಮ ಕಾರ್ಯಕ್ರಮವನ್ನು ಆಗಸ್ಟ್ ೬ ರಂದು ನಗರದ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಳಕು ಟ್ರಸ್ಟ್ ಹಾಗೂ ಮಾನವ ಹಕ್ಕುಗಳ ಹಿತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಬೆಳಕು ಟ್ರಸ್ಟ್ ಹಾಗೂ ಮಾನವ ಹಕ್ಕುಗಳ ಹಿತ ರಕ್ಷಣಾ ವೇದಿಕೆ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದ ಎಂದ ಅವರು,ರಾಜ್ಯ ಮಟ್ಟದ ಕನ್ನಡ ಸಿರಿವಂತಿಕೆ ಸಂಭ್ರಮ ಕಾರ್ಯಕ್ರಮವನ್ನು ನಮ್ಮ ಜಿಲ್ಲೆಯಲ್ಲಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಂದಿಪುರ ಪುಣ್ಯಕ್ಷೇತ್ರದ ಪರಮಪೂಜ್ಯ ಡಾ. ಮಹೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳುತ್ತಿದ್ದಾರೆ, ಆಶೀರ್ವಚನ ಹಾಗೂ ಪಾವನ ನೇತೃತ್ವ ಬಳ್ಳಾರಿಯ ಕಲ್ಯಾಣ ಸ್ವಾಮಿ ಮಠದ ಪರಮಪೂಜ್ಯ ಮನ ಪ್ರಕಲ್ಯಾಣ ಮಹಾಸ್ವಾಮಿಗಳು ವಹಿಸಿಕೊಳ್ಳುತ್ತಾರೆ. ಸಂಭ್ರಮದ ಅಧ್ಯಕ್ಷರಾಗಿ ೫೫೦ ಪುಸ್ತಕಗಳನ್ನ ಬರೆದಿರುವ ಹಿರಿಯ ಸಾಹಿತಿ ಎಸ್. ವಿ. ಪಾಟೀಲ್ ಗುಂಡೂರು ಅವರು ವಹಿಸಿಕೊಳ್ಳಲಿದ್ದಾರೆ. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರ ಶರಣ ಭೂಪಾಲ ನಾಡಗೌಡ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದರು.
ವಿಶೇಷ ಅತಿಥಿಯಾಗಿ ಚಿತ್ರನಟಿ ಕಾವೇರಿ ಹದಡಿ ಆಗಮಿಸಲಿದ್ದು,ಸಂಭ್ರಮದಲ್ಲಿ ಅನೇಕ ಗಣ್ಯರು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು, ಗಾಯಕರು, ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧನೆ ಮಾಡುತ್ತಿರುವ ಸಾದಕರು, ಪ್ರಶಸ್ತಿ ಪುರಸ್ಕೃತರು ಸ್ಥಳೀಯ ಜನಪ್ರತಿನಿಧಿಗಳು, ಸಂಘಟಕರು ಭಾಗವಹಿಸಲಿದ್ದಾರೆ ಎಂದರು.
ಸಂಭ್ರಮದ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳ ಗಾಯನ, ನೃತ್ಯ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ನಡೆಯುತ್ತದೆ, ಬೇರೆ ಬೇರೆ ರಾಜ್ಯ ಹಾಗೂ ಎಲ್ಲಾ ಜಿಲ್ಲೆಗಳಿಂದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯಮಟ್ಟದ ಕತ್ವದ ಸಿರಿವಂತಿಕೆ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಮದ್ಲಾಪೂರು, ರಾಜ್ಯ ಸಲಹೆಗಾರ ಮಾರುತಿ ಬಡಿಗೇರ, ಜನನಿ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.