ಆ. ೩೦ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

ಖರ್ಗೆ, ರಾಹುಲ್ ಭಾಗಿ

ಮೈಸೂರು, ಆ. ೨೮- ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ ಈ ತಿಂಗಳ ೩೦ರಂದು ಮೈಸೂರಿನಲ್ಲಿ ವಿದ್ಯುಕ್ತ ಚಾಲನೆ ನೀಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೂರು ದಿನಗಳ ಕಾಲ ಮೈಸೂರಿಗೆ ಭೇಟಿ ನೀಡಿರುವ ಮುಖ್ಯಮಂತ್ರಿಗಳು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ ಐದು ಗ್ಯಾರಂಟಿಗಳ ಪೈಕಿ ನಾಲ್ಕನೇ ಯೋಜನೆ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಆ. ೩೦ ರಂದು ಆಯೋಜಿಸಿರುವ ಸರ್ಕಾರಿ ಕಾರ್ಯದಲ್ಲಿ ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳು ಸೇರಿ ಒಟ್ಟಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಘೋಷಿಸಿರುವ ಗೃಹ ಲಕ್ಷ್ಮಿ ಯೋಜನೆ ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಕಾರ್ಯಕ್ರಮವಾಗಿದೆ. ೧ಕೋಟಿ ೩೩ ಲಕ್ಷ ಕುಟುಂಬ ಯಜಮಾನಿ ಖಾತೆಗೆ ಪ್ರತಿ ತಿಂಗಳ ೨ ಸಾವಿರ ರೂಪಾಯಿ ಜಮೆ ಮಾಡುತ್ತೇವೆ. ಇದರಿಂದ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದ್ದು, ಒಂದು ತಿಂಗಳಿಗೆ ೪ ರಿಂದ ೫ ಸಾವಿರ ರೂ. ಅವರಿಗೆ ಸಿಗಲಿದೆ. ಇದರಿಂದಾಗಿ ಜನರ ಕೊಂಡುಕೊಳ್ಳುವ ಶಕ್ತಿ ಹಾಗೂ ಆರ್ಥಿಕ ಪರಿಸ್ಥಿತಿಯೂ ಹೆಚ್ಚಳವಾಗುವುದರ ಜೊತೆಗೆ ಜಿಡಿಪಿ ಬೆಳವಣಿಗೆ, ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಕೇವಲ ಮೈಸೂರಿನಲ್ಲೂ ಮಾತ್ರವಲ್ಲ, ಎಲ್ಲ ಜಿಲ್ಲೆಗಳಲ್ಲೂ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.