
ಬೆಂಗಳೂರು,ಆ.೩- ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಹೊಸ ಇನ್ಸಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಇದೇ ೨೩ ಮತ್ತು ೨೪ ರಂದು ವಿರಾಜಪಟೇಯಲ್ಲಿ ಹೊಸ ಬಾಳಿಗೆ ಅಡಿ ಇಡಲು ಸಜ್ಜಾಗಿದ್ದಾರೆ.
ಬಹುಕಾಲದ ಗೆಳೆಯ ಹಾಗೂ ನಟ ಭುವನ್ ಪೊನ್ನಣ್ಣ ಅವರನ್ನು ವರಿಸಲಿದ್ದಾರೆ. ಹಲವು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಯಲ್ಲಿತ್ತು ಎನ್ನುವುದು ಚಿತ್ರರಂಗದ ಬಹುತೇಕರಿಗೆ ಗೊತ್ತಿದ್ದ ಸಂಗತಿ, ಇದೀಗ ಆ ಪ್ರೀತಿಗೆ ಮದುವೆ ಎನ್ನುವ ಅಧಿಕೃತ ಮುದ್ರೆ ಒಪ್ಪಲು ಈ ಜೋಡಿ ನಿರ್ಧರಿಸಿದೆ.
ಇದೇ ೨೩ ಮತ್ತು ೨೪ ರಂದು ಮದುವೆಯಾಗುತ್ತಿರುವ ವಿಷಯವನ್ನು ನಟಿ ಹರ್ಷಿಕಾ ಪೂಣಚ್ಚ ಖಚಿತಪಡಿಸಿದ್ದು ಮದುವೆಗೆ ಬನ್ನಿ ಎಂದು ಆಪ್ತರು ಹಾಗು ಸ್ನೇಹಿತರಲ್ಲಿ ಮನವಿ ಮಾಡಿದ್ದಾರೆ.
ಕೊಡಗಿನಲ್ಲಿ ಮದುವೆಯಾಗುತ್ತಿದ್ದು ಕೊಡವ ಸಂಪ್ರದಾಯದಂತೆ ನಡೆಯಲಿದೆ, ಮದುವೆಗೆ ಬನ್ನಿ ಹಾರೈಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ ಹೇಳುವುದಕ್ಕೂ ಮುನ್ನ ಹಿರಿಯ ಕಲಾವಿದ ಸಾಧುಕೋಕಿಲ ಅವರು ಹರ್ಷಿಕಾ ಪೂಣಚ್ಚ ಮದುವೆಯಾಗುತ್ತಿದ್ದಾರೆ ಎನ್ನುವ ವಿಷಯ ಬಹಿರಂಗ ಪಡಿಸಿದರು. ಹೀಗಾಗಿ ಅನಿವಾರ್ಯವಾಗಿ ನಟಿ ಹರ್ಷಿಕಾ ಪೂಣಚ್ಚ ಮದುವೆ ದಿನಾಂಕವನ್ನು ಆಪ್ತರ ಜೊತೆ ಹಂಚಿಕೊಂಡು ಮದುವೆ ಆಹ್ವಾನಿಸಿದ್ದಾರೆ.
ಪಿಯುಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ನಟಿ ಹರ್ಷಿಕಾ ಪೂಣಚ್ಚ ಕಳೆದ ೧೫ ವರ್ಷಗಳ ಅವಧಿಯಲ್ಲಿ ವಿಭಿನ್ನ ಚಿತ್ರಗಳಲ್ಲಿ ಸಿಕ್ಕ ಬೇರೆ ಬೇರೆ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ಧಾರೆ.
ಇದರ ಜೊತೆಗೆ ಬೋಜಪುರಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸುವ ಮೂಲಕ ಕನ್ನಡದ ನಟಿಯರು ಎಲ್ಲಾ ಭಾಷೆಯಲ್ಲಿ ನಟಿಸಲು ಸಿದ್ದ ಎನ್ನುವುದನ್ನು ನಿರೂಪಿಸಿದ್ದಾರೆ.
ಕಳೆದ ೧೫ ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ಕೆಲಸದ ಮೇಲೆ ನಂಬಿಕೆ ಇಟ್ಟವರು. ಇದೀಗ ಹೊಸ ಬಾಳಿಗೆ ಹೆಜ್ಜೆ ಇಡುತ್ತಿದ್ದು ಮದುವೆಯ ನಂತರ ಚಿತ್ರರಂಗದಲ್ಲಿ ಮುಂದುವರಿಯುವುದು ಅಥವಾ ಬಿಡುವುದು ಪತಿಯೊಂದಿಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.