ಆ. ೨೦: ದೇವರಾಜ ಅರಸು ೧೦೭ನೇ ಜನ್ಮ ಜಯಂತಿ

ಕುಣಿಗಲ್, ಆ. ೧- ಹಿಂದುಳಿದ ವರ್ಗಗಳ ಹರಿಕಾರರಾದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ರವರ ೧೦೭ನೇ ಜನ್ಮ ಜಯಂತಿಯನ್ನು ತಾಲ್ಲೂಕು ಆಡಳಿತದ ವತಿಯಿಂದ ಆಗಸ್ಟ್ ೨೦ ರಂದು ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಹರಿಕಾರರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರ ೧೦೭ನೇ ಜನ್ಮ ಜಯಂತಿಯ ಪೂರ್ವಭಾವಿ ಸಭೆಯು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಮಹಾಬಲೇಶ್ವರ ಅಧ್ಯಕ್ಷತೆಯಲ್ಲಿ ನಡೆದು ಬರುವ ಆಗಸ್ಟ್ ೨೦ರಂದು ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರೊಂದಿಗೆ ಹಿಂದುಳಿದ ವರ್ಗಗಳ ಮುಖಂಡರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಾಸಕ ಡಾ. ಹೆಚ್.ಡಿ. ರಂಗನಾಥ್, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಾರ್ವತಮ್ಮ ಸೇರಿದಂತೆ ವಿವಿಧ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.