ಆ.೧ ಕ್ಕೆ ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ

ದಾವಣಗೆರೆ.ಜು.೨೯: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನು ಒಳಗೊಂಡಂತೆ ಕೇಂದ್ರದ ಹಿಂದುಳಿದ ವರ್ಗಗಳ (ಓಬಿಸಿ) ಸೇರಿಸಬೇಕು ಎಂದು ಒತ್ತಾಯಿಸಿ ಆ. 1 ರಂದು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವೀರಶೈವ ಲಿಂಗಾಯತರು ಒಂದೇ. ಕಳೆದ ಅರವತ್ತು ವರ್ಷದಿಂದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಒತ್ತಾಯ ಇದೆ. ಸರ್ಕಾರಗಳು ಸೇರಿಸಲಾಗಿದೆ ಎಂದು ಹೇಳುತ್ತಿವೆ. ಆದರೆ, ಅನುಷ್ಠಾನಕ್ಕೆ ಬಂದಿಲ್ಲ. ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಆ.೧ ರ ಮಧ್ಯಾಹ್ನ 12ಕ್ಕೆ ಮಹಾತ್ಮ ಗಾಂಧಿ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ರಾದ ಎಸ್.ಎಸ್. ಗಣೇಶ್, ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಆವರಗೊಳ್ಳ ಪುರವರ್ಗದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿ ತಗ್ಗಿನಮಠದ ಶ್ರೀಗಳು, ಚನ್ನಗಿರಿಯ ಶ್ರೀ ಕೇದಾರ ಲಿಂಗೇಶ್ವರ ಸ್ವಾಮೀಜಿ, ಹರಿಹರದ ಪುಣ್ಯಕೋಟಿ ಮಠದ ಸ್ವಾಮೀಜಿ ಇತರರು ಭಾಗವಹಿಸುವರು ಎಂದು ತಿಳಿಸಿದರು.ವೀರಶೈವ ಲಿಂಗಾಯತ ಸಮುದಾಯದ ಲ್ಲಿ 90 ಕ್ಕೂ ಹೆಚ್ಚು ಒಳಪಂಗಡಗಳಿವೆ. ಎಲ್ಲ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸುವುದರಿಂದ ಐಎಎಸ್, ಐಪಿಎಸ್, ಐಅರ್ ಎಸ್ ಇತರೆಡೆ ಉದ್ಯೋಗ ಅವಕಾಶಕ್ಕೆ ಅನುಕೂಲ ಆಗಲಿದೆ. ‌ಆರ್ಥಿಕವಾಗಿ ಹಿಂದುಳಿದವರಿಗೆ ಸಾಕಷ್ಟು ಒಳ್ಳೆಯದಾಗಲಿದೆ. ಸರ್ಕಾರ ಕೂಡಲೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.ಮಹಾಸಭಾದ ಜಿ. ಶಿವಯೋಗಪ್ಪ, ನಿಖಿಲ್ ಕೊಂಡಜ್ಜಿ, ಶುಭ ಐನಹಳ್ಳಿ, ಶೋಭಾ ಕೊಟ್ರೇಶ್, ಸಂದೀಪ್ ಅಣಬೇರು, ಜಯಪ್ರಕಾಶ್ ಮಾಗಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.