ಆ.೧೮ ಕ್ಕೆ ನೂರಾರು ವರ್ಷ ಹಳೆಯದಾದ ಕ್ಯಾಮೆರಾಗಳ ಪ್ರದರ್ಶನ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೧೬: ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ೧೮೪ ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ರಾಜ್ಯದಲ್ಲೇ ಪ್ರಥಮ  ಬಾರಿಗೆ ಸಾರ್ವಜನಿಕರಿಗಾಗಿ ನೂರಾರು ವರ್ಷ ಹಳೆಯದಾದ ಕ್ಯಾಮೆರಾಗಳು ಹಾಗೂ ಛಾಯಾಗ್ರಹಣ ಪರಿಕರಗಳ ಪ್ರದರ್ಶನವನ್ನು ಆಗಸ್ಟ್ ೧೮ ಹಾಗೂ ೧೯ ರಂದು ದಾವಣಗೆರೆ ಜಿಲ್ಲಾ  ಗುರುಭವನದಲ್ಲಿ ಬೆಳಿಗ್ಗೆ ೧೦ ರಿಂದ ರಾತ್ರಿ ೮ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಕ್ಷಣಮಾತ್ರದಲ್ಲಿಯೇ ಛಾಯಾಚಿತ್ರ ತೆಗೆಯಬಹುದು. ಆದರೆ ಬಹು ಹಿಂದೆ ಒಂದು ಛಾಯಾಚಿತ್ರ ತೆಗೆಯಲು ಹಾಗೂ ಪ್ರಿಂಟ್ ಹಾಕುವ ಪ್ರಕ್ರಿಯೆಗಳಿಗೆ  ಸಾಕಷ್ಟು ಸಮಯ ಹಿಡಿಯುತ್ತಿತ್ತು. ನೂರಾರು ವರ್ಷಗಳ ಹಿಂದಿನ ಕ್ಯಾಮೆರಾಗಳು ಹಾಗೂ ಪರಿಕರಗಳ ಪ್ರದರ್ಶನದ ಮೂಲಕ  ಜನರಿಗೆ ಮಾಹಿತಿ ನೀಡುವ ಉದ್ದೇಶ ನಮ್ಮದಾಗಿದೆ ಎಂದರು.೧೯೨೦ ನೇ ಇಸವಿಯ ಫೀಡ್ ಕ್ಯಾಮೆರಾ, ಮೇಡ್ ಇನ್ ಇಂಡಿಯಾ ಕ್ಯಾಮೆರಾ ಆದ ಪಿಯುಎನ್ ಎನ್ ವೈ, ಯಶಿಕಾ ಕೊಡ್ಯಾಕ್ ಸೇರಿದಂತೆ ಅಂದಿನ ಕಾಲದ ಕ್ಯಾಮರಾ ಹಾಗೂ ಪರಿಕರಗಳನ್ನು  ಪ್ರದರ್ಶಿಸಿದ್ದು, ಎರಡು ದಿನ ಸಾರ್ವಜನಿಕರು ಉಚಿತ ವೀಕ್ಷಣೆ ಮಾಡಲು ಅವಕಾಶವಿದೆ ಎಂದರು.ಆ. ೧೮ ರಂದು ಕಾರ್ಯಕ್ರಮದ ಸಾನ್ನಿಧ್ಯವನ್ನು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಸ್ವಾಮಿಗಳು ವಹಿಸಲಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್   ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ,  ವಿಜಯ್ ಜಾಧವ್,ತಿಪ್ಪೇಸ್ವಾಮಿ, ದುಗ್ಗೇಶ್ ಕಡೆಮನಿ,ಅರುಣ್,ಪ್ರಕಾಶ್,ಕಿರಣ್,ಖಾಸಿಂ,ಕೆ.ಪಿ ನಾಗರಾಜ್,ಎ.ಬಿ. ರುದ್ರಮ್ಮ ಉಪಸ್ಥಿತರಿದ್ದರು.