ಬೆಂಗಳೂರು, ಜುಲೈ ೨೦ – ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಕಾರ್ಯಕ್ರಮ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಆಗಸ್ಟ್ ೧೬ ರಿಂದ ಯೋಜನೆ ಜಾರಿಗೆ ಬರಲಿದೆ. ಚುನಾವಣಾ ಪೂರ್ವದಲ್ಲಿ ಐದು ಗ್ಯಾರೆಂಟಿಗಳನ್ನು ಜನರ ಮುಂದೆ ಪ್ರಸ್ತಾಪಿಸಿದ್ದೆವು. ಈ ಗ್ಯಾರೆಂಟಿಗಳು ನಮಗೆ ಸವಾಲಾಗಿತ್ತು. ಇವುಗಳನ್ನು ಜಾರಿಮಾಡುವುದು ಕಷ್ಟ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಭಾರತದ ಪ್ರಧಾನಿ ಸೇರಿದಂತೆ ಎಂದು ಹಲವರು ಟೀಕಿಸಿದರು. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಸಮಾಜದಲ್ಲಿ ಅವಕಾಶ ವಂಚಿತರಾದವರು, ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಿಲ್ಲದವರಿಗೆ ವಿಶೇಷ ಕಾರ್ಯಕ್ರಮಗಳನ್ನು ಅವರಿಗಾಗಿ ರೂಪಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು. ಆಗ ಮಾತ್ರ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ, ಲಿಂಗ ತಾರತಮ್ಯಗಳನ್ನು ಹೋಗಲಾಡಿಸಲು ಸಾಧ್ಯ. ಇದನ್ನು ಸರಿಪಡಿಸದಿದ್ದರೆ, ದೇಶಕ್ಕೆ ಸ್ವಾತಂತ್ರ್ಯವಿದ್ದರೂ ಸಾರ್ಥಕವಾಗುವುದಿಲ್ಲ ಎಂದರು.
ಮಹಿಳೆಯರು ಹಿಂದುಳಿದ ಸಮಾಜದಲ್ಲಿ ಆರ್ಥಿಕ ಚಲನೆ ಇರುವುದಿಲ್ಲ. ಮಹಿಳೆಯರೂ ಕೂಡ ಹಿಂದುಳಿದವರೇ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳಷ್ಟೇ ಮಹಿಳೆಯರೂ ಹಿಂದುಳಿದಿರುವುದರಿಂದ ಅಸಮಾನತೆ ನಿರ್ಮಾಣವಾಗಿದೆ. ಮಹಿಳೆಯರು ಹಿಂದಿನಿಂದಲೂ ಶಿಕ್ಷಣದಿಂದ ವಂಚಿತರಾಗಿದ್ದರು. ಅಂತಹ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಚಲನೆಯಿರುವುದಿಲ್ಲ. ಸಮಾಜದಲ್ಲಿ ಮಹಿಳೆಯರೂ ಅರ್ಧದಷ್ಟು ಇದ್ದು, ಅವರೂ ಮುಖ್ಯವಾಹಿನಿಗೆ ಬರಬೇಕು. ಸಮಾಜದಲ್ಲಿ ಮಹಿಳೆಯರು ಸಬಲರಾಗಿರದಿದ್ದರೆ, ದೇಶ ಸಬಲವಾಗಲು ಸಾಧ್ಯವೇ ಇಲ್ಲ ಹೇಳಿದರು.
ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಗ್ಯಾರಂಟಿ ಯೋಜನೆಗಳನ್ನು ಸಚಿವ ಸಂಪುಟದಲ್ಲಿ ತಾತ್ವಿಕ ಅನುಮೋದನೆಯನ್ನು ನೀಡಲಾಗಿದೆ. ಜೂನ್ ೮ ರಂದು ಎರಡನೇ ಸಚಿವ ಸಂಪುಟದಲ್ಲಿ ಯಾವ ಯಾವ ದಿನಗಳಂದು ಈ ಯೋಜನೆಗಳು ಜಾರಿಯಾಗಬೇಕೆಂದು ತೀರ್ಮಾನಿಸಲಾಯಿತು. ಆದ್ದರಿಂದ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಇಡೀ ದೇಶದಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಹರಿಯಾಣದಲ್ಲಿ ಅನ್ನಭಾಗ್ಯ ಯೋಜನೆ ಇಲ್ಲ ಎಂದು ತಿಳಿಸಿದರು.
ದೇಶದಲ್ಲಿಯೇ ಸಾಮಾಜಿಕ ಭದ್ರತೆಯಡಿ ದೊಡ್ಡ ಮೊತ್ತದ ಯೋಜನೆ – ಗೃಹಲಕ್ಷ್ಮಿ
ಗೃಹಲಕ್ಷ್ಮಿ ಯೋಜನೆಗೆ ೩೫ ಸಾವಿರ ಕೋಟಿ ರೂ. ವಾರ್ಷಿಕವಾಗಿ ಖರ್ಚಾಗುತ್ತಿದ್ದು, ಸಾಮಾಜಿಕ ಭದ್ರತೆ ಯೋಜನೆಯಡಿ ಇಂತಹ ದೊಡ್ಡ ಮೊತ್ತದ ಯೋಜನೆ ಜಾರಿಗೊಳಿಸಿರುವ ದೇಶದಲ್ಲಿಯೇ ಮೊದಲ ರಾಜ್ಯ ಕರ್ನಾಟಕ. ೧.೨೮ ಕೋಟಿ ಕುಟುಂಬದ ಯಜಮಾನಿಗೆ ೨೦೦೦ ರೂ. ನೀಡುವ ಯೋಜನೆಯಾಗಿದ್ದು, ನೋಂದಣಿ ಮಾಡಿಸಲು ಯಾವ ಕಾಲಮಿತಿಯೂ ಇಲ್ಲ. ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರ, ಪ್ರಜಾ ಪ್ರತಿನಿಧಿಗಳು ಸೇವೆ ನೀಡಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ರಿಜ್ವಾನ್ ಅರ್ಷದ್, ಸಚಿವರಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.