ಆ.೧೬ ಐಸಿಸಿ ಸಭೆ, ಕೆಳಭಾಗಕ್ಕೆ ಸಮರ್ಪಕ ನೀರಿಗಾಗಿ ಸೂಕ್ತ ಕ್ರಮ- ಬೋಸರಾಜು

ರಾಯಚೂರು,ಆ.೧೩-
ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಮೈಲ್ ೬೯ ರಲ್ಲಿ ಇಂದು ೭.೫ ಅಡಿ, ಮೈಲ್ ೪೭- ೧೧ ಅಡಿ ನೀರು ಸರಬರಾಜು ಆಗುವದರಿಂದ ಕೆಳಭಾಗದ ಮಾನ್ವಿ, ಸಿರವಾರ, ರಾಯಚೂರಿಗೆ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ ಶೀಘ್ರ ಮೈಲ್ ೬೯ ರಲ್ಲಿ ೮.೫ ರಿಂದ ೯ ಅಡಿ, ಮೈಲ್ ೪೭ ರಲ್ಲಿ ೧೨ ಅಡಿ ನೀರಿನ ಪ್ರಮಾಣವನ್ನು ಕಾಯ್ದಿರಿಸುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಕೆಎನ್‌ಎನ್‌ಎಲ್ ಎಂಡಿ ಅವರಿಗೆ ದೂರವಾಣಿ ಮುಖಾಂತರ ಮಾತನಾಡಿ ಸೂಚಿಸಿದ್ದಾರೆ.
ತುಂಗಭದ್ರ ಎಡದಂಡೆ ನಾಲೆಗೆ ನೀರು ಹರಿಸಿ ವಾರ ಸಮೀಪವಾದರೂ ಇನ್ನೂ ರಾಯಚೂರು ಜಿಲ್ಲೆಗೆ ನೀರು ತಲುಪಿಲ್ಲ ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶೀಘ್ರ ನೀರಿನಪ್ರಮಾಣ ಕಾಯ್ದಿರಿಸುವಂತೆ ತಿಳಿಸಿದ್ದಾರೆ.
ದಿ. ೧೬ ರಂದು ಐಸಿಸಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ರಾಯಚೂರು ಜಿಲ್ಲೆಯ ಕೆಳಭಾಗದ ರೈತರ ಜಮೀನುಗಳಿಗೆ ಅನುಗುಣವಾಗಿ ಮೈಲ್ ೪೭, ೬೯, ೧೦೪ ಗಳಲ್ಲಿ ಸಮರ್ಪಕ ನೀರಿನ ಪ್ರಮಾಣ ಕಾಯ್ದಿರಿಸಲು ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದರು.
ಈಗಾಗಲೆ ಈ ಕುರಿತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಶರಣ್ಪಪ್ರಕಾಶ ಪಾಟೀಲ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಕೆಎನ್‌ಎನ್ ಎಲ್ ಎಂಡಿ ಅವರೊಂದಿಗೆ ಮಾತನಾಡಿ ಕೆಳಭಾಗದ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮದ ಕುರಿತು ಮಾತನಾಡಲಾಗಿದೆ ಎಂದು ತಿಳಿಸಿದ್ದಾರೆ.