ಆ.೧೩ – ೧೫ : ನೋಡಲ್ ಅಧಿಕಾರಿಗಳ ನೇಮಕ

ಸ್ವಾತಂತ್ರ್ಯ ಅಮೃತ ಮಹೋತ್ಸವ : ಹರ್ ಘರ್ ತಿರಂಗ
ರಾಯಚೂರು.ಜು.೨೮- ಸ್ವಾತಂತ್ರ್ಯೋತ್ಸವದ ೭೫ ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಆ.೧೩ ರಿಂದ ೧೫ ರ ವರೆಗೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ೮ ಜನ ನೋಡಲ್ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಆದೇಶಿಸಿದ್ದಾರೆ.
ಅಮೃತ ಮಹೋತ್ಸವ ಅಂಗವಾಗಿ ಆ.೧೩ ರಿಂದ ೧೫ ರವರೆಗೆ ರಾಜ್ಯದ ಎಲ್ಲಾ ಮನೆಗಳ ಮೇಲೆ ಮತ್ತು ಸರ್ಕಾರಿ ಕಛೇರಿಗಳ ಮೇಲೆ ರಾಷ್ಟ್ರಧ್ವಜಾ ಹಾರಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನ ಯಶಸ್ವಿ ಮತ್ತು ಸುಗಮ ನಿರ್ವಹಣಾ ಹಿತದೃಷ್ಟಿಯಿಂದ ಮೇಲುಸ್ತುವಾರಿ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಹರ್ ಘರ್ ತಿರಂಗ ಅಭಿಯಾನ ಯಶಸ್ವಿ ಧ್ವಜಾ ಸರಬರಾಜು ಮಾಡಲು ಸ್ಥಳ ಗುರುತಿಸುವಿಕೆ ಧ್ವಜಾ ಮಾರಾಟದ ಮೂಲಕ ವಿಲೇವಾರಿ ಮಾಡುವುದು ಮತ್ತು ಹಣ ಕ್ರೂಢೀಕರಿಸಿ ಸದರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ಮರಳಿಸುವುದು ಈ ಅಧಿಕಾರಿಗಳ ಉದ್ದೇಶವಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಡಾ.ರೋಣಿ ಅವರನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ. ಯೋಜನಾ ನಿರ್ದೇಶಕರಾದ ಮಹೇಂದ್ರಕುಮಾರ ಅವರನ್ನು ಸಹಾಯಕ ನೋಡಲ್ ಅಧಿಕಾರಿಯನ್ನಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಗಾ ವಹಿಸುವಂತೆ ಜವಾಬ್ದಾರಿ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತುಗಾರ್ ಇವರ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಮೇಲುಸ್ತುವಾರಿ ಸಹಾಯಕ ನೋಡಲ್ ಅಧಿಕಾರಿಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಗಳಾ ನಾಯಕ ಇವರನ್ನು ಧ್ವಜಾ ವಿವರ ಲೆಕ್ಕಪತ್ರ ಸರ್ಕಾರದ ಮಾರ್ಗಸೂಚಿ ಸ್ವೀಕರಿಸಿ, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ನೀಡುವ ಜವಾಬ್ದಾರಿ ವಹಿಸಲಾಗಿದೆ. ಶಿರಸ್ತೆದಾರ ವೇಣುಯಾದವ, ಮಲ್ಲೇಶ ಹಾಗೂ ನಲ್ಲಾರೆಡ್ಡಿ, ಉಪೇಂದ್ರ ಇವರನ್ನು ಸಹಾಯಕರು, ಪರಿಚಾಲಕರನ್ನಾಗಿ ನಿಯುಕ್ತಿಗೊಳಿಸಲಾಗಿದೆ.