ಆ.೧೩ರಿಂದ ೧೫ವರೆಗೆ ನಮ್ಮ ಮನೆಯಲ್ಲೂ ರಾಷ್ಟ್ರ ಧ್ವಜಾರೋಹಣ: ಡಿ.ಸಿ ಚಂದ್ರಶೇಖರ ನಾಯಕ

ರಾಯಚೂರು.ಜು.೨೬- ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ನಮ್ಮ ಮನೆಯಲ್ಲೂ ರಾಷ್ಟ್ರ ಧ್ವಜಾರೋಹಣ ಮಾಡುವುದು ದೇಶಾಭಿಮಾನದ ಸಂಕೇತ ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.
ಆ.೧೩ರಿಂದ ೧೫ವರೆಗೆ ಎಲ್ಲ ಸರ್ಕಾರಿ ಕಚೇರಿ, ಮನೆ, ಫೇಸ್ಟುಕ್ ಮಳಿಗೆ ಇತ್ಯಾದಿ ಕಡೆ ಪ್ರತಿ ದಿನ ತ್ರಿವರ್ಣ ಧ್ವಜ ಹಾರಿಸಬೇಕು. ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದ ಮಾಡಿದವರನ್ನು ಸ್ಮರಿಸಬೇಕು. ಇದರ ಅಂಗವಾಗಿ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲ ಇಲಾಖೆ, ನಗರ, ಸ್ಥಳೀಯ ಸಂಸ್ಥೆಗಳು ತಮ್ಮ ಅಧೀನ ಕಚೇರಿ ಹಾಗೂ ಸಿಬ್ಬಂದಿ ಮನೆಗಳ ಮೇಲೆ, ಪೊಲೀಸ್ ಠಾಣೆ, ಶಾಲೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವಂತೆ ಕ್ರಮ ವಹಿಸಬೇಕು.
ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಾದ ಪಂಚಾಯತ್ ರಾಜ್ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು, ಒಕ್ಕೂಟಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ, ಸಹಕಾರ ಸಂಘಗಳು, ಉಪ ಅಂಚೆ ಕಚೇರಿಗಳಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ರೋಜಾ ಸೇವಕರುಗಳು, ಶಿಕ್ಷಕರುಗಳನ್ನು ಉತ್ತೇಜಿಸಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ರಾಷ್ಟ್ರೀಯ ಧ್ವಜವನ್ನು ಹಾರಿಸಬೇಕು.
ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆಯಲ್ಲಿ ಕರಪತ್ರ, ಸ್ಯಾಂಡೀಸ್, ಬ್ಯಾನರ್ ಇತ್ಯಾದಿಗಳ ಮುಖಾಂತರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಹಲ್‌ಗಳು, ಉದ್ಯಾನವನಗಳು, ಹೋಟೆಲ್‌ಗಳು, ಅಲ್ಲದೇ ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಹೊಂದಿರುವ ಕಚೇರಿಗಳ ಮುಂದೆ ಪ್ರಚಾರ ಮಾಡಲು ಸೂಕ್ತ ಕ್ರಮ ವಹಿಸಬೇಕು.
ಗ್ರಾಮ ಪಂಚಾಯಿತಿಗಳು ರಾಷ್ಟ್ರ ಧ್ವಜವನ್ನು ಬೃಹತ್ ಮಟ್ಟದಲ್ಲಿ ಖರೀದಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ರಾಷ್ಟ್ರ ಧ್ವಜಗಳ ಹಂಚಿಕೆ ಮತ್ತು ಮಾರಾಟ ಮಾಡುವ ಸ್ಥಳಗಳನ್ನು ಗುರುತಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.