ಆ.೧೨ ಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರತಿಭಟನೆ

ದಾವಣಗೆರೆ.ಆ.೬; ಕೇಂದ್ರ ಸರ್ಕಾರದ ಕಬ್ಬು ಬೆಲೆ ದರ ನಿಗಧಿ, ಜಿ.ಎಸ್.ಟಿ. ಇತರೆ ಎಲ್ಲಾ ಲೋಪಗಳನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಜ್ಯಾದ್ಯಂತ ಆ. 12 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00 ರವರೆಗೆ ರಸ್ತೆ ತಡೆ ನಡೆಸಿ ರೈತರ ಸಂಕಷ್ಟಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದು  ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುದಾವಣಗೆರೆಯಲ್ಲಿ ಸಾಂಕೇತಿಕವಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕರೆಗೆ ನೈತಿಕ ಬೆಂಬಲ ವ್ಯಕ್ತಪಡಿಸಲು ಅಂದು ಮಳೆ ಗಮನಿಸಿ ಆದಷ್ಟು ನಾಗರೀಕರಿಗೆ ತೊಂದರೆ ಆಗದಂತೆ ಜನ ಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವಂತಹ ರಸ್ತೆಯೊಂದನ್ನು ಆಯ್ಕೆ ಮಾಡಿ ರಸ್ತೆ ತಡೆ ಮಾಡಲಾಗುವುದು. ಕೇಂದ್ರ ಸರ್ಕಾರ 10.25 ಸಕ್ಕರೆ ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ 3050 ನ್ಯಾಯಯುತ, ಲಾಭದಾಯಕ ಬೆಲೆ ಘೋಷಿಸಿರುವುದು ಅವೈಜ್ಞಾನಿಕ ಮತ್ತು ಅನೈತಿಕವಾಗಿದ್ದು ರಾಜ್ಯ ಕಬ್ಬು ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸುತ್ತದೆ. ಕಳೆದ ಸಾಲಿಗಿಂತ ಎಫ್.ಆರ್.ಪಿ. ಯನ್ನು ಕೇವಲ 150 ರೂ. ಹೆಚ್ಚಿಸಲಾಗಿದೆ. ಆದರೆ ಕಟಾವು ಸೇರಿ ಕಬ್ಬಿನ ಉತ್ಪಾದನಾ ವೆಚ್ಚ ಪ್ರಟಿ ಟನ್ನಿಗೆ 500/- ರೂ.ಗಿಂತಲೂ ಹೆಚ್ಚಾಗಿದೆ. 9.5 ಸಕ್ಕರೆ ಇಳುವರಿ ತರುವ ಪ್ರತಿ ಟನ್ ಕಬ್ಬಿಗೆ 3500- ರೂ.ಗಳ ಎಫ್.ಆರ್.ಪಿ. ನಿಗಧಿಯಾಗಿದ್ದರೆ ಉತ್ಪಾದನಾ ವೆಚ್ಚಕ್ಕೆ ಕಬ್ಬು ಬೆಳೆಗಾರರು ಒಂದಿಷ್ಟು ಲಾಭ ಕಾಣಲು ಸಾಧ್ಯವಾಗುತ್ತಿತ್ತು. ಪ್ರತಿ ಸಾಲು ಎಫ್.ಆರ್. ಪಿ. ಹೆಚ್ಚಿಸಿದರೂ ಕನಿಷ್ಟ ಸಕ್ಕರೆ ಇಳುವರಿಯ ಪ್ರಮಾಣವನ್ನು ಹೆಚ್ಚಿಸುತ್ತಲೇ ಬರುತ್ತಿರುವುದರಿಂದ ಎಫ್.ಆರ್.ಪಿ.ಯ. ಹೆಚ್ಚಳದಿಂದ ಕಬ್ಬು ಬೆಳೆಗಾರರಿಗೆ ಯಾವುದೇ ಅನುಕೂಲವಿಲ್ಲ. ಕೇಂದ್ರ ಸರ್ಕಾರದ ಜಾಣ ತಂತ್ರವನ್ನು ಅರಿಯದಷ್ಟು ಕಬ್ಬು ಬೆಳೆಗಾರರು ಮುಗ್ಧರಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ್ದ ನರೇಂದ್ರಮೋದಿಯವರ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಆದಾಯವನ್ನು ಹೆಚ್ಚಿಸುತ್ತಲೇ ಬರುತ್ತಿದ್ದಾರೆ.
ಕಬ್ಬು ಸೇರಿ ಎಲ್ಲ ಕೃಷಿ ಒಳಸುರಿಗಳಿಗೆ ಜಿ.ಎಸ್.ಟಿ. ವಿಧಿಸುತ್ತಿರುವುದು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಿಸುತ್ತಿದೆ. ಕನಿಷ್ಟ ಬೆಂಬಲ ಬೆಲೆ ನಿಗಧಿ ಮಾಡುವಾಗ ಆಹಾರ ಪದಾರ್ಥಗಳು ಗ್ರಾಹಕರ ಕೈಗೆಟಕಬೇಕೆಂದು ಎಂ.ಎಸ್.ಬಿ. ಯನ್ನು ಸದಾ ಕಡಿಮೆ ನಿಗಧಿಮಾಡುತ್ತಾರೆ. ಆದರೆ ಜಿ.ಎಸ್.ಟಿ. ವಿಧಿಸುವಾಗ ಅದೇ ಆಹಾರ ಪದಾರ್ಥಗಳು ಗ್ರಾಹಕರಿಗೆ ದುಬಾರಿಯಾಗುವುದನ್ನು ಏಕೆ ಯೋಚಿಸುವುದಿಲ್ಲ ಇದು ದ್ವಂದ್ವ ಅಲ್ಲವೇ ಎಂದರು.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಬಜೆಟ್‌ನ ಒಂದು ಭಾಷಣದಲ್ಲಿ ಆನೆಗೆ ನಿಗಧಿತ ಆಹಾರ ಸಿಗದಿದ್ದಾಗ ಎಲ್ಲಿ ಬೇಕಾದರೂ ಅಲ್ಲಿ ನುಗ್ಗುತ್ತದೆ. ಹಾಗೇ ತೆರಿಗೆಯೂ ಕೂಡ ನಿರ್ಧಿಷ್ಟ ಪ್ರಮಾಣದಲ್ಲಿ ಬರದಿದ್ದರೆ ತೆರಿಗೆಯ ವಲಯಗಳು ಅನಿವಾರ್ಯವಾಗಿ ವಿಸ್ತಾರವಾಗುತ್ತವೆ ಎಂದು ಹೇಳಿದ್ದರು. ಅಂದರೆ ಇಲ್ಲಿ ಜಿ.ಎಸ್.ಟಿ. ವಿಸ್ತಾರವಾಗುತ್ತಿರುವುದನ್ನು ಗಮನಸಿದರೆ ಕೇಂದ್ರ ಸರ್ಕಾರ ಆಡಳಿತ ವೈಫಲ್ಯದಿಂದ ತನ್ನ ತೆರಿಗೆಯನ್ನು ಸಂಗ್ರಹಿಸಲು ವಿಫಲವಾಗುತ್ತಿದೆ ಎನ್ನುವುದನ್ನು ಸೂಕ್ಷö್ಮವಗಿ ಗಮನಿಸಿದಲ್ಲಿ ಮಾತ್ರ ಅರ್ಥವಾಗುತ್ತದೆ. ಒಂದು ಕಡೆ ವಿಶ್ವಗುರು ಎಂದು ಹೇಳಿಕೊಳ್ಳುವ ನಾಯಕತ್ವ ತೆರಿಗೆಯನ್ನು ವಿಸ್ತರಿಸುತ್ತಾ ತನ್ನನ್ನು ತಾನೇ ವ್ಯಂಗ್ಯ ಮಾಡಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡ ಪೂಜಾರ್ ಅಂಜಿನಪ್ಪ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಹುಲ್ಲುಮನಿ ಠಾಕೂರ್ ಉಪಸ್ಥಿತರಿದ್ದರು. 

Attachments area