ಆ್ಯಂಬುಲೆನ್ಸ್ ಪಲ್ಟಿ: ನಾಲ್ವರು ಮೃತ್ಯು

ಬೈಂದೂರು, ಜು.೨೧- ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಸಾಗಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಶಿರೂರು ಟೋಲ್ ಫ್ಲಾಜಾದಲ್ಲಿ ಢಿಕ್ಕಿ ಹೊಡೆದ ಪರಿಣಾಮ ರೋಗಿ ಸಹಿತ ನಾಲ್ವರು ದಾರುಣವಾಗಿ ಮೃತಪಟ್ಟು, ಐದು ಮಂದಿ ತೀವ್ರ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ ಹಾಡಗೇರಿ ನಿವಾಸಿಗಳಾದ ಲೋಕೇಶ್ ಮಾಧವ ನಾಯ್ಕ (38), ಜ್ಯೋತಿ ಲೋಕೇಶ್ ನಾಯ್ಕ (32), ಗಜಾನನ ಲಕ್ಷ್ಮಣ ನಾಯ್ಕ(36) ಹಾಗೂ ಮಂಜು ನಾಥ ನಾಯ್ಕ (42) ಎಂದು ಗುರುತಿಸಲಾಗಿದೆ. ಆ್ಯಂಬುಲೆನ್ಸ್ ನಲ್ಲಿದ್ದ ಗೀತಾ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಂಬುಲೆನ್ಸ್ ಚಾಲಕ ರೋಶನ್ ರೋಡಿಗ್ರಸ್, ಟೋಲ್ ಸಿಬ್ಬಂದಿ ಸಂಬಾಜಿ ಗೋಲ್ಪಾಡೆ, ಆ್ಯಂಬುಲೆನ್ಸ್ ವಾಹನದಲ್ಲಿದ್ದ ಗಣೇಶ್ ನಾಯ್ಕ, ಶಶಾಂಕ್ ನಾಯ್ಕ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಜಾನನ ನಾಯ್ಕ ಅವರನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಅವರನ್ನು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕುಟುಂಬದವರು ಆ್ಯಂಬುಲೆನ್ಸ್ ನಲ್ಲಿ ಕರೆದು ಕೊಂಡು ಬರುತ್ತಿದ್ದರೆನ್ನಲಾಗಿದೆ. ಶಿರೂರು ಟೋಲ್ ಬಳಿ ಆ್ಯಂಬುಲೆನ್ಸ್ ಆಗಮಿಸುತ್ತಿರುವುದನ್ನು ಅರಿತ ಟೋಲ್ ಸಿಬ್ಬಂದಿ, ರಸ್ತೆಗೆ ಅಡ್ಡವಿಟ್ಟಿದ್ದ ಫೈಬರ್ ಬ್ಯಾರಿಕೇಡ್ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಕೊಡಲು ಮುಂದಾದರು. ಆಗಲೇ ಟೋಲ್ ಬಳಿ ಬಂದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಮೀಟರ್ ತನಕ ಅಡ್ಡಾದಿಡ್ಡಿ ಚಲಿಸಿ ಟೋಲ್ ಸಂಗ್ರಹ ಕೊಠಡಿ, ಬಳಿಕ ಸಮೀಪದ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತು. ಈ ಆ್ಯಂಬುಲೆನ್ಸ್ ಫೈಬರ್ ಬ್ಯಾರಿಗೇಡ್ ತೆಗೆಯಲು ಹೋದ ಟೋಲ್ ಸಿಬ್ಬಂದಿ ಮೇಲೆಯೂ ಬಿತ್ತು. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ಹಿಂಭಾಗದ ಬಾಗಿಲು ತೆರೆದುಕೊಂಡಿದ್ದು ಹಿಂಬದಿ ಕುಳಿತವರು ರಸ್ತೆಗೆ ಎಸೆಯಲ್ಪಟ್ಟರು. ಇದರಿಂದ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಲೋಕೇಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್ ಟೋಲ್ ಗೇಟ್‌ಗೆ ಢಿಕ್ಕಿ ಹೊಡೆಯುವ ಭೀಕರ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.