ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಕಲಬುರಗಿಯಲ್ಲಿಯೇ ಉಳಿಸಿಕೊಳ್ಳಲು ಆಗ್ರಹ

ಕಲಬುರಗಿ,ಡಿ.30-ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಚೇರಿಸಿ ಸ್ಥಳಾಂತರಕ್ಕೆ ಅವಕಾಶ ಕೊಡದೆ ಕಲಬುರಗಿಯಲ್ಲೇ ಉಳಿಸಿಕೊಳ್ಳಲು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಹಾಗೂ ಶಾಸಕರಾದ ಪ್ರಿಯಾಂಕ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಜ್ಯದ ಬೇರೆ ಬೇರೆ ಕಂದಾಯ ವಿಭಾಗಗಳಲ್ಲಿ ಇಂತಹ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಕಲಬುರಗಿ ಜಿಲ್ಲೆಯಲ್ಲಿರುವ ಪ್ರಾಧಿಕಾರವನ್ನು ಬೇರೆಡೆ ಸ್ಥಳಾಂತರ ಮಾಡಲು ಹೊರಟಿರುವುದು ಸರಿಯಾದ ಧೋರಣೆಯಲ್ಲ. ಇದು ಕಲ್ಯಾಣ ಕರ್ನಾಟಕಕ್ಕೆ ಹಾಗೂ ಕಲಬುರಗಿ ಜಿಲ್ಲೆಯ ಸಾರ್ವಜನಿಕರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಹಿಂದುಳಿದ ಕಂದಾಯ ವಿಭಾಗವಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಯೋಗಾಲಯ ವ್ಯಾಪಾರಸ್ಥರ ಹಾಗೂ ಆಹಾರ ಉತ್ಪನ್ನ ಉದ್ಯಮಿಗಳ ಆಹಾರ ಉತ್ಪನ್ನ ತಪಾಸಣೆ ನಡೆಸಲು ಸಹಾಯಕವಾಗಿದೆ ಹಾಗೂ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಪ್ರತಿ ತಿಂಗಳು ಸರಾಸರಿ 800 ರಷ್ಟು ಆಹಾರ ಮಾದರಿಗಳನ್ನು ಈ ಪ್ರಾಧಿಕಾರದಲ್ಲಿ ಪರೀಕ್ಷಿಸಲಾಗುತ್ತದೆ. ಆದ್ದರಿಂದ ಸದರಿ ಪ್ರಾಧಿಕಾರವನ್ನು ಬೇರೆಡೆ ಸ್ಥಳಾಂತರ ಮಾಡದೇ ಕಲಬುರಗಿಯಲ್ಲೇ ಮುಂದುವರೆಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.