ಆಹಾರ ಸುರಕ್ಷತೆ: ಆಂದೋಲನ ನಡೆಸಲು ಸೂಚನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.24; ಆಹಾರ ಸುರಕ್ಷತೆ ಕುರಿತ ಆಂದೋಲನವನ್ನು ಎಲ್ಲಾ ತಾಲ್ಲೂಕು ಕೇಂದ್ರಗಳು ಹಾಗೂ ಇತರೆ ಸ್ಥಳಗಳಲ್ಲಿ ನಡೆಸಬೇಕು. ಎಲ್ಲಾ ವ್ಯಾಪಾರಸ್ಥರನ್ನು ನೋಂದಣಿ, ಪರವಾನಗಿ ವ್ಯಾಪ್ತಿಗೆ ತರಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಚೆಗೆ  ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರಸಭೆ ವತಿಯಿಂದ ಟ್ರೇಡ್ ಲೈಸನ್ಸ್ ನೀಡುವಾಗ FSSAI (ಆಹಾರ ಸುರಕ್ಷತಾ & ಗುಣಮಟ್ಟ ಇಲಾಖೆ) ಲೈಸನ್ಸ್ ಪಡೆದಿದ್ದಾರೆಯೇ ಎಂದು ಗಮನಿಸಿ ನಂತರ ಟ್ರೇಡ್ ಲೈಸನ್ಸ್ ನೀಡಬೇಕು. ಬೀದಿ ಬದಿ ವ್ಯಾಪಾರಿಗಳು ನೊಂದಣಿ ಮಾಡಿಕೊಳ್ಳದೆ ಅನೈರ್ಮಲ್ಯದ ವಾತಾವರಣದಲ್ಲಿ ವ್ಯಾಪಾರ ನಡಸುತ್ತಿದ್ದು, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಿದರು. ಎಲ್ಲಾ ತರಹದ ವ್ಯಾಪಾರಸ್ಥರು ಅಂದರೆ ಆಹಾರ ಪದಾರ್ಥಗಳ ಮಾರಾಟಗಾರರು, ತಯಾರಕರು, ಸಗಟು ವ್ಯಾಪಾರಸ್ಥರು, ಚಿಲ್ಲರೆ  ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು, ಆಹಾರ ಸುರಕ್ಷತೆ ಕಾಯ್ದೆ 2006, ನಿಯಮ ನಿಬಂಧನೆ 2011, ಸೆಕ್ಷನ್ 63ರಡಿ ನೋಂದಣಿ, ಪರವಾನಗಿ ಪಡೆಯುವುದು ಕಡ್ಡಾಯ ಎಂದರು. ಆಹಾರವಾಗಿ ಬಳಸುವ ಎಲ್ಲಾ ಪದಾರ್ಥ ಅಂದರೆ ದವಸ ಧಾನ್ಯ, ತರಕಾರಿ, ಮಾಂಸ, ಕೋಳಿ, ಮೊಟ್ಟೆ, ಹಾಲು, ಬೀದಿ ಬದಿ ವ್ಯಾಪಾರಿ, ನೀರಿನ ವ್ಯಾಪಾರ, ಬೇಕರಿ, ಹೋಟೆಲ್, ಸಿಹಿ ತಿಂಡಿ ಅಂಗಡಿ, ಆಹಾರ ಪದಾರ್ಥ ಪ್ಯಾಕ್ ಮಾಡಿ ಮಾರುವವರು, ಸರ್ಕಾರಿ, ಅರೆ ಸರ್ಕಾರಿ ಶಾಲೆ, ಹಾಸ್ಟೆಲ್‍ಗಳಲ್ಲಿ ಅಡುಗೆ ಕಾರ್ಯ ನಿರ್ವಹಿಸುವವರು, ಬೆಲ್ಲದ ವ್ಯಾಪಾರಿ, ಅಡುಗೆ ಎಣ್ಣೆ ವ್ಯಾಪಾರಿ, ಬೇಳೆ ಹಾಗೂ ಇತರೆ ಎಲ್ಲಾ ತರಹದ ವ್ಯಾಪಾರಸ್ಥರು ಇದರ ವ್ಯಾಪ್ತಿಗೆ ಬರುತ್ತಾರೆ. ಹಾಗೂ ಆಹಾರ ಸುರಕ್ಷತೆ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಲು ಸೂಚಿಸಿದರು.ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆದ ಬಂದ ದಾರಿಯನ್ನು ಸಭೆಯಲ್ಲಿ ವಿವರಿಸಿದರು.ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಬಿ.ಕೆ.ಮಂಜುನಾಥಸ್ವಾಮಿ, ವರ್ತಕರ ಸಂಘ ಸುಬ್ರಮಣ್ಯ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಂ.ಮಹೇಂದ್ರ ಕುಮಾರ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಜ್ಞಾನೇಶ್ವರಿ, ಆಹಾರ ಸುರಕ್ಷತಾಧಿಕಾರಿಗಳಾದ ತಿರುಮಲೇಶ್, ಚಿದಾನಂದಪ್ಪ, ನಂದಿನಿ ಕಡಿ, ಮಂಜುನಾಥ್ ಹಾಗೂ ಇತರೆ ಇಲಾಖಾ ಸಿಬ್ಬಂದಿ ಇದ್ದರು.

========