ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಸವಣೂರ, ಜೂ10: ಪ್ರಾಯಶಃ ಮಾನವ ಸಮುದಾಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಮರೆಮಾಚಿರುವ ಸಮುದಾಯವಾಗಿದೆ ಎಂದು ಸಿಡಿಪಿಓ ಅಣ್ಣಪ್ಪ ಹೆಗಡೆ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಎದುರು ಇಲ್ಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ತಾಲೂಕಿನ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಹಮ್ಮಿಕೊಳ್ಳಲಾಗಿದ್ದ ಆಹಾರ ಸಾಮಗ್ರಿಗಳ ಕಿಟ್‍ವಿತರಣಾ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಾಕಷ್ಟು ಸಮಸ್ಯೆಗಳಿದ್ದರೂ ಸಹ ತಮ್ಮ ಹಸಿವನ್ನು ಸಹ ಅನ್ಯರಿಗೆ ಹೇಳಿಕೊಳ್ಳದ ಸ್ಥಿತಿಯಲ್ಲಿರುತ್ತಾರೆ. ಇವರ ಹಸಿವು ನೀಗಿಸಲು ನಮ್ಮ ಇಲಾಖೆ ಸಿಬ್ಬಂದಿಗಳಿಗೆ ಮನವಿ ಮಾಡಿದಾಗ ಎಲ್ಲರೂ ಸಹಾಯಕ್ಕೆ ಮುಂದಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಇನ್ನಷ್ಟು ಜನ ಲಿಂಗತ್ವ ಅಲ್ಪ ಸಂಖ್ಯಾತರು ಉಳಿದಿದ್ದರೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಸಹಾಯ ಮಾಡುವುದಾಗಿ ತಿಳಿಸಿದರು.
ಬಳಿಕ ಲೈಂಗಿಕ ಅಲ್ಪ ಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ. ಮಾತನಾಡಿ, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ವ್ಯವಸ್ಥೆ ಮತ್ತು ಸರಕಾರ ಶೋಷಿತ ವರ್ಗಗಳ ಬಗ್ಗೆ ಸಮಾಜದ ಅಂಚಿಗೆ ಹಾಗೂ ದೌರ್ಜನ್ಯಕ್ಕೆ ತಳ್ಳಲ್ಪಟ್ಟ ಸಮುದಾಯಗಳ ಬಗ್ಗೆ ವ್ಯವಸ್ಥೆ ಮತ್ತು ಜಿಲ್ಲಾಡಳಿತ ಗಮನಹರಿಸುವಲ್ಲಿ ಎಡವಿದೆ. ಕಳೆದ ಲಾಕ್‍ಡೌನ್ ಹಾಗೂ ಈ ಬಾರಿಯೂ ಸಹ ಸಿಡಿಪಿಓ ಹಾಗೂ ಅವರ ಸಿಬ್ಬಂದಿಗಳು ವೈಯಕ್ತಿಕ ಹಣದಲ್ಲಿ ಸವಣೂರ ತಾಲೂಕಿನಲ್ಲಿರುವ 115 ಜನ ಲೈಂಗಿಕ ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದರು.
ಆಹಾರ ಸಾಮಗ್ರಿಗಳ ಕಿಟ್‍ವಿತರಣೆಗೆ ಎ.ಸಿ ಅನ್ನಪೂರ್ಣ ಮುದಕಮ್ಮನವರ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಇಓ ಮುನಿಯಪ್ಪ ಪಿ, ತಾ.ಪಂ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಇಬ್ರಾಹಿಂಸಾಬ್ ಮದರಖಂಡಿ, ಸಂಜೀವಿನಿ ಲಿಂಗತ್ವ ಅಲ್ಪ ಸಂಖ್ಯಾತರ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಮೊಹ್ಮದ ಉಸ್ಮಾನ ನೆರೆಗಲ್ ಸೇರಿದಂತೆ ಇತರರು ಇದ್ದರು.