ಆಹಾರ ಸರಬರಾಜು ನೆಪದಲ್ಲಿ ವಂಚನೆ ಮಹಿಳೆ ಸೆರೆ

ಬೆಂಗಳೂರು,ಜ.೪- ಲಾಕ್‌ಡೌನ್ ಸಮಯದಲ್ಲಿ ಐಟಿ ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಾಗಿ ಉದ್ಯೋಗಸ್ಥರಿಗೆ ನಂಬಿಸಿ ಲಕ್ಷಾಂತರ ರೂ. ಗಳ ವಂಚನೆ ಮಾಡಿರುವ ಮಹಿಳೆಯೊಬ್ಬಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತಹಳ್ಳಿಯ ನಂದಿನಿ ಬಂಧಿತ ಆರೋಪಿಯಾಗಿದ್ದಾಳೆ. ಬಂಧಿತ ಆರೋಪಿಯು, ಐಟಿ ಕಂಪನಿಗಳಿಗೆ ಕಾಫಿ, ಟೀ ಹಾಗೂ ಊಟದ ಸರಬರಾಜು ಮಾಡುತ್ತೇನೆ ಎಂದು ನಂಬಿಸಿದ್ದಳು. ಡೆಪಾಸಿಟ್ ನೆಪದಲ್ಲಿ ಲಕ್ಷಾಂತರ ರೂ. ಹಣ ಪಡೆದಿದ್ದಳು. ಹಣವನ್ನೂ ಕೊಡದೆ, ಊಟವನ್ನೂ ಸರಬರಾಜು ಮಾಡದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.
ಅಲ್ಲದೇ, ಕೆಂಪಾಪುರ ವ್ಯಾಪ್ತಿಯ ಅನೇಕರಿಗೆ ಕಾಯಂ ಉದ್ಯೋಗ ನೀಡುವುದಾಗಿ ಹೇಳಿ ೧.೫ ಲಕ್ಷ ರೂಪಾಯಿ ಮುಂಗಡ ಹಣ ನೀಡುವಂತೆ ಹೇಳಿ ವಂಚಿಸಿದ್ದಾಳೆ. ಹಣ ನೀಡಿ ಜನರು ಕೆಲಸ ಮಾಡುತ್ತಿದ್ದರು. ಮೊದಮೊದಲು ಉದ್ಯೋಗಿಗಳಿಗೆ ಹಣ ಪಾವತಿಸಿದ್ದು, ನಂತರದ ದಿನಗಳಲ್ಲಿ ಹಣ ನೀಡದೇ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂಬ ಆರೋಪ ಹಿನ್ನೆಲೆಯಲ್ಲಿ ನಂದಿನಿ ವಿರುದ್ಧ ದೂರು ದಾಖಲಾಗಿದೆ.
ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದು, ಮೋಸ ಹೋದ ಉದ್ಯೋಗಸ್ಥರು ಆರೋಪಿ ನಂದಿನಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.