ಆಹಾರ ಶೈಲಿ ಬದಲಾವಣೆಯಿಂದ ಆರೋಗ್ಯ ವೃದ್ಧಿ

ಚಿತ್ರದುರ್ಗ,ಸೆ.8:ಪೋಷಣ್ ಅಭಿಯಾನ ಜನರ ಜೀವನ ಶೈಲಿ, ಆಹಾರ ಶೈಲಿಯಲ್ಲಿ ಬದಲಾವಣೆ ತಂದು ಆರೋಗ್ಯ ವೃದ್ಧಿಸುವ ಕಾರ್ಯಕ್ರಮವಾಗಿದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್. ಎಸ್. ಮಂಜುನಾಥ್ ಹೇಳಿದರು.
ಇಲ್ಲಿನ ಗಾಂಧಿನಗರದ ಅಂಬೇಡ್ಕರ್ ಭವನದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಪೋಷಣ್ ಅಭಿಯಾನ ಮಾತೃವಂದನ ಸಪ್ತಾಹ ಪೌಷ್ಠಿಕಾಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ತಾಲ್ಲೂಕಿನ 266 ಹಳ್ಳಿಗಳಲ್ಲಿ 531 ಅಂಗನವಾಡಿ ಕೇಂದ್ರಗಳಲ್ಲಿ ಸಮುದಾಯವನ್ನು ತೊಡಗಿಸಿಕೊಂಡು ಜಾಥಾ, ಸ್ವಚ್ಚತಾ  ಕಾರ್ಯಕ್ರಮ, ಪೌಷ್ಠಿಕಾಹಾರ ಪ್ರಾತ್ಯಕ್ಷಿಕೆ ಆಹಾರ ಕಿಟ್ ವಿತರಣೆ, ಲಸಿಕಾ ಎದೆಹಾಲಿನ ಮಹತ್ವ ಗರ್ಭಿಣಿ ಬಾಣಂತಿ ಆರೈಕೆ, ಅಪೌಷ್ಟಿಕತೆ ಮಕ್ಕಳನ್ನು ಗುರುತಿಸುವಿಕೆ ಉನ್ನತ ಚಿಕಿತ್ಸೆಗಾಗಿ ಜಿಲ್ಲಾ ಪೌಷ್ಠಿಕಾ ಪುನಶ್ಚೇತನ ಕೇಂದ್ರಗಳಿಗೆ ನಿರ್ದೇಶಿಸಿ ಅಪೌಷ್ಠಿಕತೆ ಸರಿಪಡಿಸುವುದು ಈ ಎಲ್ಲಾ ಕಾರ್ಯಗಳಿಂದ ತಾಯಿಮರಣ ಶಿಶುಮರಣ ನಿಯಂತ್ರಿಸಲು ಪ್ರೋತ್ಸಾಹಿಸುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸುಧಾ ಮಾತನಾಡಿ, ಪೋಷಣ್ ಮಾಸಾಚಾರಣೆಯನ್ನು ಒಂದು ತಿಂಗಳಿನ ನಾಲ್ಕು ವಾರಗಳಲ್ಲಿ ವಾರಕ್ಕೂಂದು ಮಾಹಿತಿ ಶಿಕ್ಷಣ ಸಂವಹನ ನೀಡುವ ಮೂಲಕ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಯಿತು. ಕರಿಬೇವು, ನುಗ್ಗೆ ಸಸಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಮಹಿಳಾ ಅಭಿವೃದ್ಧಿ ಅಧಿಕಾರಿ ಆತೀಕಾ ಖಾನಂ, ಮೇಲ್ವಿಚಾರಕರಾದ ಮಂಜುಳಾ, ಮಾರುತಿಪ್ರಸಾದ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಕಿಶೋರಿಯರು ಉಪಸ್ಥಿತರಿದ್ದರು.