ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿP ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ರಾಯಚೂರು,ಜು.೨೨- ಆಹಾರ ಪದಾರ್ಥಗಳ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೇರಿಕೆಯನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಮ್ಯೂನಿಸ್ಟ್ ಸಂಘದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.
ಅಕ್ಕಿ, ಜೋಳ, ರಾಗಿ ಮುಂತಾದ ಆಹಾರ ಧಾನ್ಯಗಳ ಮೇಲೆ, ಮೊಸರಿನಂತಹ ಡೈರಿ ಉತ್ಪನ್ನಗಳ ಮೇಲೆ ಕೇಂದ್ರ ಜಿಎಸ್‌ಟಿ ಮಂಡಳಿಯು ಶೇ ೫ರಷ್ಟು ತೆರಿಗೆ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಈಗಾಗಲೇ ಬೆಲೆ ಏರಿಕೆ, ಹಣದುಬ್ಬರಗಳಿಂದ ಜನತೆ ತತ್ತರಿಸಿದ್ದಾರೆ. ಬೆಲೆ ಏರಿಕೆಯ ಪ್ರಮಾಣದಲ್ಲಿ ಜನಸಾಮಾನ್ಯರ ಆದಾಯ ಹೆಚ್ಚಳವಾಗಿಲ್ಲ. ಈಗ ತಿನ್ನುವ ಅನ್ನದ ಮೇಲೂ ತೆರಿಗೆ ವಿಧಿಸುವ ಕ್ರೂರ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಜುಲೈ ೧೮ ರಿಂದ ಜಾರಿಗೆ ಬರುವ ಈ ತೆರಿಗೆಯ ಪರಿಣಾಮವಾಗಿ ಅಕ್ಕಿಗೆ ಕಿಲೋ ಒಂದಕ್ಕೆ ರೂ. ೩ ರಿಂದ ೪ ಏರಿಕೆಯಾಗಲಿದೆ. ಮೊಸರಿಗೂ ಪ್ರತಿ ಲೀಟರ್ ಗೆ ರೂ. ೨ರಿಂದ ೩ ಹೆಚ್ಚಳವಾಗಲಿದೆ. ಇದರಿಂದ ಗ್ರಾಹಕರು ಮತ್ತು ರೈತರಿಬ್ಬರಿಗೂ ತೊಂದರೆಯಾಗಲಿದೆ. ಆಹಾರ ಪದಾರ್ಥಗಳ ವ್ಯಾಪಾರದಲ್ಲೂ ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲ ಮಾಡುವುದಕ್ಕಾಗಿ ಈ ತೀರ್ಮಾನ ಕೈಗೊಂಡಿರುವುದು ಜನರಿಗೆ ಬಗೆದ ದ್ರೋಹವಲ್ಲದೆ ಮತ್ತೇನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದಡೆ ಆದಾನಿ ಅಂಬಾನಿಯಂತಹ ದೊಡ್ಡ ಕಾರ್ಪೋರೇಟ್ ದೈತ್ಯರಿಗೆ ತೆರಿಗೆ ಕಡಿಮೆ ಮಾಡುತ್ತಿರುವುದು, ಬಂಗಾರ, ದುಬಾರಿ ಸಾಮಾನುಗಳ ಮೇಲಿನ ತೆರಿಗೆ ಇಳಿಸುತ್ತಿರುವುದು, ಆದಾನಿಯಂತಹ ಕಾರ್ಮೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡಲು ಅವರ ವ್ಯಾಪಾರ ವಹಿವಾಟುಗಳ ಸರಬರಾಜು ಮಾಡಲು ಸಾರಿಗೆ ಸೇವಾ ಶುಲ್ಕ ಇಳಿಸುವ ಮೂಲಕ ಕೇಂದ್ರದ ಮೋದಿ ಸರ್ಕಾರ ಮತ್ತೊಮ್ಮೆ ತನ್ನ ಬಂಡವಾಳಿಗರ ಪರ ಧೋರಣೆಯನ್ನು ಮೆರೆದಿದೆ ಎಂದರು.
ಜೀವನಾವಶ್ಯಕ ವಸ್ತುಗಳ ಮೇಲಿನ ಈ ತೆರಿಗೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ. ಕೇಂದ್ರ ಸರ್ಕಾರ ಬಡವರ ವಿರೋಧಿ ಶ್ರೀಮಂತರ ಪರ ನಿಲುವಿನ ವಿರುದ್ಧ ರಾಜ್ಯದ ಜನತೆ ಪ್ರಬಲ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಹೇಶ್ ಚೀಕಲಪರ್ವಿ, ವಿರೇಶ್. ಎನ್. ಎಸ್, ಅಣ್ಣಪ್ಪ,, ಮಲ್ಲನ್ನಗೌಡ, ಕಾರ್ತಿಕ, ಹಯ್ಯಾಳಪ್ಪ ಸೇರಿದಂತೆ ಉಪಸ್ಥಿತರಿದ್ದರು.