ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ರದ್ದಿಗೆ ಸಿಪಿಐಎಂ ಒತ್ತಾಯ

ರಾಯಚೂರು,ಜು.೨೦-ಕೇಂದ್ರ ಸರಕಾರ ಆಹಾರ ಪದಾರ್ಥಗಳ ಮೇಲೆ ಶೇ.೫ ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದು ಖಂಡನೀಯ ಇದನ್ನು ಕೂಡಲೇ ಹಿಂಪಡಿಯಬೇಕೆಂದು ಸಿಪಿಐಎಂ ತಾಲೂಕು ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ. ಇದು ಜನ ಸಾಮಾನ್ಯರ ವಿರೋಧಿಯಾಗಿದೆ ಇದನ್ನು ಕೂಡಲೇ ರದ್ದು ಮಾಡಬೇಕೆಂದು ಸಿಪಿಐಎಂ ಆಗ್ರಹಿಸಿದರು. ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ, ಹಾಲು, ಮೊಸರು ಮುಂತಾದ ಆಹಾರ ಪದಾರ್ಥಗಳನ್ನು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳಾಗಿದ್ದು, ಬಡ ಜನರ ಬದುಕು ನಡೆಸಲು ಕಷ್ಟವಾಗುತ್ತದೆ ಎಂದು ಆರೋಪಿಸಿದರು.
ಇವುಗಳ ಮೇಲಿನ ತೆರಿಗೆಯಿಂದ ಜನ ಸಾಮಾನ್ಯರ ಜೀವನ ವೆಚ್ಚ ದುಬಾರಿಯಾಗುತ್ತದೆ. ಈಗಾಗಲೆ ಬೆಲೆ ಏರಿಕೆ, ಹಣ ದುಬ್ಬರಗಳಿಂದ ಜನತೆ ತತ್ತರಿಸಿದ್ದಾರೆ. ಬೆಲೆ ಏರಿಕೆಗೆ ತಕ್ಕಂತೆ ಜನ ಸಾಮಾನ್ಯರ ಆದಾಯ ಹೆಚ್ಚಳವಾಗಿಲ್ಲ. ಇಂತಹ ಸಂದರ್ಭದಲ್ಲಿ ತಿನ್ನುವ ಅಹಾರದ ಮೇಲೆ ತೆರಿಗೆ ವಿಧಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದರು.
ಹಾಲು, ಮೊಸರಿಗೂ ಜಿಎಸ್‌ಟಿ ಹೇರಿರುವ ಸರ್ಕಾರದ ಕ್ರಮದಿಂದಾಗಿ ರೈತರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಪದಾರ್ಥಗಳ ವ್ಯಾಪಾರದಲ್ಲಿಯೂ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಇದರಿಂದಾಗಿ ಜನರಿಗೆ ಸರ್ಕಾರ ದ್ರೋಹವೆಸಗುತ್ತಿದೆ. ಕಾರ್ಪೋರೇಟ್ ಕಂಪನಿಗಳ ಮತ್ತು ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯತಿ ನೀಡಿ ಅವರಿಗೆ ಅನುಕೂಲ ಮಾಡುವ ಸರ್ಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರದ ಈ ನಿರ್ಧಾರ ಅತ್ಯಂತ ಜನವಿರೋಧಿಯಾಗಿದೆ.
ರಾಜ್ಯಗಳಿಗೆ ಕೊಡಬೇಕಾದ ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಇದರಿಂದಾಗಿ, ಜಿಎಸ್‌ಟಿ ತೆರಿಗೆ ಜೊತೆಗೆ ರಾಜ್ಯಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೀವನಾವಶ್ಯಕ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆಯ ಕ್ರಮವನ್ನು ತಕ್ಷಣವೇ ಕೈಬಿಡಬೇಕಂದು ಸಿಪಿಐಎಂ ಸಂಘಟನೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ಜಿ.ವೀರೇಶ, ಜಿ.ಎಸ್.ಶರಣಬಸವ ಸೇರಿದಂತೆ ಉಪಸ್ಥಿತರಿದ್ದರು.