ಆಹಾರ ಪದಾರ್ಥಗಳ ಮೇಲೂ ಜಿಎಸ್‍ಟಿ: ತೀವ್ರ ವಿರೋಧ

ಬೀದರ್: ಜು.19:ಕೇಂದ್ರ ಸರ್ಕಾರವು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳ ಮೇಲೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿಧಿಸಿದ್ದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೀತಾ ಪಂಡಿತರಾವ್ ಚಿದ್ರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅಕ್ಕಿ, ಗೋಧಿ, ಬೇಳೆ ಕಾಳು, ಮೊಸರು, ಮಜ್ಜಿಗೆ, ಲಸ್ಸಿ, ಪನೀರ್ ಸೇರಿದಂತೆ ಪ್ಯಾಕ್ ಮಾಡಿದ ಎಲ್ಲ ಉತ್ಪನ್ನಗಳ ಮೇಲೆ ಶೇ 5 ರಷ್ಟು ಜಿಎಸ್‍ಟಿ ವಿಧಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆ ಕೋಣೆ ಮೇಲೆ ಶೇ 5, ಹೊಟೇಲ್ ಕೋಣೆ, ಸೋಲಾರ್ ವಾಟರ್ ಹೀಟರ್ ಮೇಲೆ ಶೇ 12, ಎಲ್‍ಇಡಿ ಬಲ್ಬ್, ಬ್ಯಾಂಕ್ ಚೆಕ್‍ಗಳ ಮೇಲೆ ಶೇ 18 ರಷ್ಟು ಜಿಎಸ್‍ಟಿ ಜಾರಿಗೊಳಿಸಿರುವುದು ಅವೈಜ್ಞಾನಿಕ ಎಂದು ಟೀಕಿಸಿದ್ದಾರೆ.

ಸರಕು ಮತ್ತು ಸೇವಾ ತೆರಿಗೆಯಿಂದ ಮೊದಲೇ ಜನ ತೊಂದರೆಯಲ್ಲಿದ್ದಾರೆ. ಈವರೆಗೆ ಬ್ರ್ಯಾಂಡೆಡ್ ಆಹಾರ ಪದಾರ್ಥಗಳಿಗೆ ಮಾತ್ರ ಜಿಎಸ್‍ಟಿ ವಿಧಿಸಲಾಗುತ್ತಿತ್ತು. ಆದರೆ, ಇದೀಗ ಬ್ರ್ಯಾಂಡೆಡ್ ಅಲ್ಲದ, ಪ್ಯಾಕ್ ಮಾಡಿರುವ ಹಾಗೂ ಲೇಬಲ್ ಇರುವ ಎಲ್ಲ ಆಹಾರ ಪದಾರ್ಥಗಳನ್ನೂ ಅದರ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಎಸ್‍ಟಿಯಿಂದ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳ ಬೆಲೆಯಲ್ಲಿ ಸಹಜವಾಗಿಯೇ ಏರಿಕೆಯಾಗಲಿದೆ. ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಆಗಲಿದೆ ಎಂದು ಹೇಳಿದ್ದಾರೆ.

ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರಕ್ಕೆ ಹಲವಾರು ಅವಕಾಶಗಳು ಇವೆ. ಹೀಗಾಗಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುವುದನ್ನು ಬಿಟ್ಟುಬಿಡಬೇಕು. ಕೂಡಲೇ ಆಹಾರ ಪದಾರ್ಥಗಳು ಸೇರಿ ದಿನಬಳಕೆ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‍ಟಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇದರ ಪರಿಣಾಮ ಅನುಭವಿಸಬೇಕಾಗಲಿದೆ ಎಂದು ಎಚ್ಚರಿಸಿದ್ದಾರೆ.