ಆಹಾರ ನಿಗಮದ ಗೋಧಿ ದಾಸ್ತಾನು ಪ್ರಮಾಣ ಇಳಿಕೆ

ಹೊಸದಿಲ್ಲಿ, ಮಾ.೧೩- ಭಾರತದ ಆಹಾರ ನಿಗಮ (ಎಫ್‌ಸಿಐ) ದಲ್ಲಿ ಗೋಧಿ ದಾಸ್ತಾನು ೨೦೧೮ರ ಬಳಿಕ ಇದೇ ಮೊದಲ ಬಾರಿಗೆ ೧೦೦ ಲಕ್ಷ ಟನ್ ಗಿಂತ ಕಡಿಮೆಯಾಗಿದ್ದು, ಈ ತಿಂಗಳು ಗೋಧಿ ದಾಸ್ತಾನು ಪ್ರಮಾಣ ೯೭ ಲಕ್ಷ ಟನ್‌ಗೆ ಇಳಿಕೆಯಾಗಿದೆ. ಕಳೆದೆರಡು ವರ್ಷಗಳಲ್ಲಿ ಕಡಿಮೆ ಸಂಗ್ರಹಣೆ ಹಾಗೂ ಬೆಲೆಗಳನ್ನು ಉಳಿಸಿಕೊಳ್ಳಲು ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯಗಳ ದಾಖಲೆಯ ಮಾರಾಟದಿಂದ ದಾಸ್ತಾನು ಕಡಿಮೆಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಕಡಿಮೆ ಖರೀದಿ ಹಾಗೂ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ದಾಖಲೆ ಪ್ರಮಾಣದಲ್ಲಿ ಮುಕ್ತ ಮಾರುಕಟ್ಟೆಗೆ ಆಹಾರಧಾನ್ಯ ಬಿಡುಗಡೆ ಮಾಡಲಾಗಿದೆ. ಇದರಿಂದ ದಾಸ್ತಾನು ಪ್ರಮಾಣ ಕಡಿಮೆಯಾಗಿದೆ. ಆದರೆ ಅತ್ತ ಅಕ್ಕಿ ದಾಸ್ತಾನು ವಿಚಾರದಲ್ಲಿ ಬಫರ್ ನಿಯಮಕ್ಕಿಂತ ನಾಲ್ಕು ಪಟ್ಟು ಅಧಿಕ ದಾಸ್ತಾನು ಹೊಂದಿದೆ. ಗೋಧಿ ದಾಸ್ತಾನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದ್ದರೂ, ಇದು ಶಾಸನಾತ್ಮಕವಾಗಿ ಇರಬೇಕಾದ ಕನಿಷ್ಠ ದಾಸ್ತಾನು ಪ್ರಮಾಣಕ್ಕಿಂತ ಅಧಿಕವಾಗಿದೆ. ಶಾಸನಾತ್ಮಕವಾಗಿ ಏಪ್ರಿಲ್ ವೇಳೆಗೆ ಆಹಾರ ನಿಗಮ ೭೪.೬ ಲಕ್ಷ ಟನ್ ಆಹಾರ ಧಾನ್ಯದ ದಾಸ್ತಾನು ಹೊಂದಿರಬೇಕು. ಆದರೆ ಸದ್ಯ ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಎಫ್‌ಸಿಐ ಹೊಂದಿದೆ. ಪ್ರಸಕ್ತ ಹಂಗಾಮಿನಲ್ಲಿ ೩೨೦ ಲಕ್ಷ ಟನ್ ಗೋಧಿ ಖರೀದಿಸುವ ಅಂದಾಜು ಇದ್ದು, ಇದು ಸರ್ಕಾರವನ್ನು ಆರಾಮದಾಯಕ ಸ್ಥಿತಿಗೆ ಒಯ್ಯಲಿದೆ ಎಂದು ಮೂಲಗಳು ಹೇಳಿವೆ. ಕಳೆದ ಜೂನ್ ತಿಂಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸರ್ಕಾರ ಮುಕ್ತ ಮಾರುಕಟ್ಟೆಗೆ ಗೋಧಿ ಮಾರಾಟ ಆರಂಭಿಸಿತ್ತು. ಫೆಬ್ರವರಿ ಕೊನೆಯ ವೇಳೆಗೆ ಭಾರತೀಯ ಆಹಾರ ನಿಗಮ ಮಾರುಕಟ್ಟೆ ಹಸ್ತಕ್ಷೇಪದ ಕ್ರಮವಾಗಿ ೯೦ ಲಕ್ಷ ಟನ್ ಗೋಧಿಯನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕ ಖರೀದಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಇದೀಗ ಮುಕ್ತ ಮಾರುಕಟ್ಟೆ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಕ್ಕಿ ಮಿಲ್ ಗಳಿಂದ ಬರಬೇಕಾದ ೩೦ ಲಕ್ಷ ಟನ್ ಹೊರತುಪಡಿಸಿ ಆಹಾರ ನಿಗಮದ ಬಳಿ ಸದ್ಯಕ್ಕೆ ೨೭೦ ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಬಫರ್ ಸ್ಟಾಕ್ ನಿಯಮಾವಳಿ ಅನ್ವಯ ಏಪ್ರಿಲ್ ೧ರ ವೇಳೆಗೆ ೧೩೬ ಲಕ್ಷ ಟನ್ ಅಕ್ಕಿ ದಾಸ್ತಾನು ಇರಬೇಕು.

ನಾವು ಹೊಂದಿರುವ ದಾಸ್ತಾನು ರಾಷ್ಟ್ರೀಯ ಆಹಾರ ಭದ್ರತೆ ಅಗತ್ಯತೆಗಳನ್ನು ಈಡೇರಿಸಲು ಸಾಕು ಹಾಗೂ ಇದು ಕನಿಷ್ಠ ದಾಸ್ತಾನು ನಿಯಮಕ್ಕಿಂತ ಅಧಿಕವಾಗಿದೆ. ಮಾರ್ಚ್ ೧ರಿಂದ ಖರೀದಿ ಸೀಸನ್ ಕೂಡಾ ಆರಂಭಾಗಿದ್ದು, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಾಗಲಿದೆ.
-ಆಹಾರ ನಿಗಮ (ಎಫ್‌ಸಿಐ)ದ ಅಧಿಕಾರಿ