ಆಹಾರ ಘಟಕದಲ್ಲಿ ಸ್ಫೋಟ: ಮೂವರ ಸಾವು

ನವದೆಹಲಿ,ಜೂ.೮- ದೆಹಲಿಯ ಆಹಾರ ಸಂಸ್ಕರಣಾ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ.
ದೆಹಲಿ ಪೊಲೀಸರ ಪ್ರಕಾರ, ಇಂದು ಮುಂಜಾನೆ ಸುಮಾರು ೩.೩೫ ಕ್ಕೆ ಘಟನೆಯ ಬಗ್ಗೆ ಮಾಹಿತಿ ಬಂದಿದ್ದು, ಆನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲುವಲ್ಲಿ ಯಶಸ್ವಿಯಾದರು.
ಕಟ್ಟಡದ ಒಳಗಿದ್ದ ಒಂಬತ್ತು ಜನರನ್ನು ರಕ್ಷಿಸಿ ನೆರೆಯ ಎಸ್‌ಎಚ್‌ಆರ್‌ಸಿ ಆಸ್ಪತ್ರೆಗೆ ರವಾನಿಸಲಾಗಿದೆ.ಅವರಲ್ಲಿ ಮೂವರು ಶ್ಯಾಮ್ (೨೪), ರಾಮ್ ಸಿಂಗ್ (೩೦) ಮತ್ತು ಬೀರ್ಪಾಲ್ (೪೨) ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೈಪ್‌ಲೈನ್ ಒಂದರಿಂದ ಅನಿಲ ಸೋರಿಕೆಯಾದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.