ಆಹಾರ ಕಿಟ್ ವಿತರಣೆ


ಧಾರವಾಡ ಜೂ.01-: ಧಾರವಾಡದ ಕಾಂಗ್ರೆಸ್ ಮುಖಂಡರು ಹಾಗೂ ಎಐಸಿಸಿ ಸದಸ್ಯರು ಆಗಿರುವ ದೀಪಕ ಚಿಂಚೋರೆ ಹಾಗೂ ಇಸ್ಮಾಯಿಲ್ ತಮಟಗಾರ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ 74 ರ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ 500ಕ್ಕೂ ಹೆಚ್ಚು ಜನರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ಆಹಾರ ಕಿಟ್ ವಿತರಿಸಿದರು.
ಆಹಾರ ಕಿಟ್ ವಿತರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಧಾರವಾಡದ ಅಂಜುಮನ್ ಸಂಸ್ಥೆ ಆವರಣದಲ್ಲಿ ನೂರಾರು ಆಟೋ ರೀಕ್ಷಾ ಚಾಲಕರಿಗೆ, ಎಮ್ಮಿಕೇರಿಯ ಸೀತಾರಾಮ ದೇವಸ್ಥಾನದಲ್ಲಿ ಹಲವಾರು ಅರ್ಚಕರು, ನೂರಾರು ಅಡುಗೆ ತಯಾರಕರು, ಅಡುಗೆ ಸಹಾಯಕರು ಹಾಗೂ ರಾಯಾಪುರದಲ್ಲಿ ನೂರಾರು ನಿರಾಶ್ರಿತರಿಗೆ ಒಟ್ಟು ಐದನೂರಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಆಹಾರ ಕಿಟ್ ವಿತರಣೆಗೆ ಮುಂದಾದ ಧಾರವಾಡದ ಕಾಂಗ್ರೆಸ್ ಮುಖಂಡರು ಹಾಗೂ ಎಐಸಿಸಿ ಸದಸ್ಯರು ಆಗಿರುವ ದೀಪಕ ಚಿಂಚೋರೆ ಹಾಗೂ ಇಸ್ಮಾಯಿಲ್ ತಮಟಗಾರ ನೇತೃತ್ವದ ತಂಡಕ್ಕೆ ಅಭಿನಂದಿಸಿದರು.ಅಲ್ಲದೆ, ಸ್ಥಳೀಯ ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜನರ ನೋವು, ನಲಿವಿಗೆ ಸ್ಪಂದಿಸಬೇಕು. ಅವರ ಅಹವಾಲುಗಳನ್ನು ಆಲಿಸಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಕರೋನಾದಿಂದ ಬಡವರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕಾಗಿರುವುದು ಸದ್ಯದ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ದೀಪಕ ಚಿಂಚೋರೆ ಮಾತನಾಡಿ, ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಾವಿರಾರು ಜನರಿಗೆ ಆಹಾರ ಕಿಟ್ ಒದಗಿಸುವ ಗುರಿ ಹೊಂದಲಾಗಿದೆ. ಹಂತ ಹಂತವಾಗಿ ಎಲ್ಲಾ ವರ್ಗದ ಬಡಜನರಿಗೆ ಕಿಟ್ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.ಈ ಕಿಟ್ ನಲ್ಲಿ ಅಕ್ಕಿ, ಎಣ್ಣಿ, ಸಕ್ಕರೆ, ತೊಗರಿ ಬೆಳೆ, ಚಹಾಪುಡಿ, ಆಲೂಗಡ್ಡೆ, ಉಳ್ಳಾಗಡ್ಡಿ ಇದೆ. ಇದು ಅವರ ತಕ್ಷಣದ ಅಗತ್ಯ ಪೂರೈಸಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಕುಂದಗೋಳ ಶಾಸಕರಾದ ಕುಸಮಾವತಿ ಶಿವಳ್ಳಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷÀರಾದ ಅಲ್ತಾಫ್ ಹಳ್ಳೂರ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ರಫೀಕ್ ದರ್ಗಾದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಮಲಕಾರಿ, ಬಸವರಾಜ ಕಿತ್ತೂರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.