ಆಹಾರಕಿಟ್ ವಿತರಣೆ

ಧಾರವಾಡ ಮೇ.21-: ಕೆಲಸದ ನಿಮಿತ್ತ ಪ್ರತಿದಿನ ಮನೆಯಿಂದ ಹೊರಗಡೆ ತೆರಳುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಫುಡ್ ಬ್ಯಾಂಕಿಂಗ್ ನೆಟ್ ವರ್ಕ್ ಸಂಸ್ಥೆಯು ಗ್ರ್ರಾಮ ವಿಕಾಸ ಸೊಸಾಯಿಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮದವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊರೊನಾ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿ ಪ್ರತಿಕೂಲವಾಗಿದೆ. ಸದಾ ಕೆಲಸದಲ್ಲಿ ತೊಡಗುವ ಪತ್ರಕರ್ತರು ತಮ್ಮ ಮತ್ತು ತಮ್ಮ ಪರಿವಾರದ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅಗತ್ಯವಿದೆ. ಈ ದಿಸೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲು ಮುಂದಾಗಬೇಕು. ಅಲ್ಲದೇ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ಬೆಲ್ಲದ ಸಲಹೆ ನೀಡಿದರು.
ಗ್ರ್ರಾಮ ವಿಕಾಸ ಸೊಸಾಯಿಟಿಯ ಅಧ್ಯಕ್ಷ ಜಗದೀಶ ನಾಯಕ ಮಾತನಾಡಿ, ಜಿಲ್ಲೆಯ ಆರೋಗ್ಯ ಕಾರ್ಯಕರ್ತರು, ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ದಿನಗೂಲಿಗಳು, ಪೌರ ಕಾರ್ಮಿಕರು ಸೇರಿದಂತೆ ಒಟ್ಟು 3.64 ಲಕ್ಷ ಜನರಿಗೆ ಆಹಾರದ ಕಿಟ್ ವಿತರಿಸುವ ಗುರಿ ಹೊಂದಿದೆ ಎಂದರು.
ಕೇಂದ್ರ ಸರಕಾರದ ಧಾರವಾಡ ಹೈಕೋರ್ಟ್ ಸಾಲಿಸಿಟರ್ ಜನರಲ್ ಅರುಣ ಜೋಶಿ, ಮುಖಂಡರಾದ ಬಸವರಾಜ ಗರಗ, ಅಮಿತ ಪಾಟೀಲ, ಸತೀಶ ನಾಯಕ, ಗಿರೀಶ ಮತ್ತಿಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.