ಆಸ್ಸಾಂ ಹೋರಾಟಗಾರರ ಮೇಲೆ ಪೋಲಿಸರ ಗುಂಡಿನ ದಾಳಿ ಖಂಡಿಸಿ ಪಾಪ್ಯೂಲರ್ ಫ್ರೆಂಟ್ ಪ್ರತಿಭಟನೆ

ಕಲಬುರಗಿ:ಸೆ.25:ಆಸ್ಸಾಂ ಹೋರಾಟಗಾರರ ಮೇಲೆ ಪೋಲಿಸರು ಗುಂಡಿನ ದಾಳಿ ಮಾಡಿದ್ದನ್ನು ಖಂಡಿಸಿ ಶನಿವಾರ ಪಾಪ್ಯೂಲರ್ ಫ್ರೆಂಟ್ ಆಫ್ ಇಂಡಿಯಾ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಆಸ್ಸಾಂನಲ್ಲಿ ಬಲವಂತದ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟಿಸಿದ ನಿರಾಯುಧ ಜನರ ಹತ್ಯೆ ಮತ್ತು ಪೋಲಿಸರ ದೌರ್ಜನ್ಯ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೋಲಿಸರು ಯಾವುದೇ ಎಚ್ಚರಿಕೆ ನೀಡದೇ ಮಹಿಳೆಯರು ಮತ್ತು ಮಕ್ಕಳು ಸಹಿತ ಸಾವಿರಾರು ಜನರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪೋಲಿಸ್ ಸಿಬ್ಬಂದಿಗಳ ನಡುವೆ ಸಿಲುಕಿಕೊಂಡ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ವರದಿಗಳು ಸೂಚಿಸಿರುವ ಪ್ರಕಾರ ಸಾವುನೋವುಗಳ ಸಂಖ್ಯೆ ವಾಸ್ತವಿಕವಾಗಿ ಇನ್ನೂ ಹೆಚ್ಚಬಹುದಾಗಿದೆ. ಹತ್ಯೆಗೀಡಾದ ಮೂವರಲ್ಲಿ ಓರ್ವ ಅಪ್ತಾಪ್ತನೂ ಸೇರಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಆಸ್ಸಾಂ ಅಧಿಕಾರಿಗಳು, ಅಕ್ರಮ ಒತ್ತುವರಿ ನಡೆಸಿದ್ದಾರೆ ಎಂದು ಆರೋಪಿಸಿ ಯಾವುದೇ ಪುನರ್ವಸತಿ ಯೋಜನೆಯನ್ನು ಪ್ರಸ್ತುತಪಡಿಸದೇ ಸುಮಾರು 4500 ಜನ ಬಡ ಮತ್ತು ಅಸಹಾಯಕ ಜನರನ್ನು ತಮ್ಮ ಮನೆಗಳಿಂದ ತೆರವುಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವಾಗಲೇ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಬಂಗಾಳಿ ಮುಸ್ಲಿಂರ ವಿರುದ್ಧ ಪ್ರಚೋದನೆಯು ಜನಾಂಗೀಯ ದ್ವೇಷದ ಹೊಸ ಅಧ್ಯಾಯವಾಗಿದೆ. ಆಸ್ಸಾಂ ಬಿಜೆಪಿ ಸರ್ಕಾರದ ಕೋಮು ವಿಭಜನಕಾರಿ ನೀತಿಗಳು ಪರಿಸ್ಥಿತಿ ಈ ಹಂತಕ್ಕೆ ಉಲ್ಬಣಗೊಳ್ಳಲು ಕಾರಣವಾಗಿದೆ. ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಸರ್ಮಾ ಅವರು ಜನಾಂಗೀಯ ಮತ್ತು ಕೋಮು ವಿಭಜನೆಯ ಲಾಭ ಪಡೆಯಲು ಉತ್ಸುಕರಾಗಿದ್ದಾರೆ ಎಂದು ಅವರು ಆರೋಪಿಸಿದರು.
ತೆರವು ಕಾರ್ಯಾಚರಣೆ ಅಮಾನವೀಯ. ಕೂಡಲೇ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು, ತಮ್ಮ, ತಮ್ಮ ಮನೆಗಳಿಂದ ಈಗಾಗಲೇ ಹೊರಹಾಕಿರುವ ಕುಟುಂಬಗಳ ಪುನರ್ವಸತಿಯನ್ನು ಖಾತ್ರಿಪಡಿಸಲು ನ್ಯಾಯಾಂಗವು ಮಧ್ಯ ಪ್ರವೇಶಿಸಬೇಕು. ಗುಂಡೇಟಿಗೆ ಬಲಿಯಾದ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಕೊಡುವಂತೆ, ಪೋಲಿಸ್ ದೌರ್ಜನ್ಯದ ಕುರಿತು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಹತ್ಯೆಗೆ ಹೊಣೆಗಾರರಾದ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಸಂಘಟನೆಯ ಚೇರಮನ್ ಒಎಂಎ ಸಲಾಮ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.