ಆಸ್ಪತ್ರೆ ರೋಗಿಗಳಿಗೆ 2 ತಿಂಗಳ ಉಚಿತ ಆಹಾರ ಸೇವೆ

ಹಗರಿಬೊಮ್ಮನಹಳ್ಳಿ ಮೇ 04 : ಪ್ರಸಿದ್ದ ವರ್ತಕರು ಹಾಗೂ ಗಂಗಾಮತ ಸಮಾಜದ ಹಿರಿಯ ಮುಖಂಡರಾಗಿದ್ದ ನಮ್ಮ ತಂದೆ ದಿ.ಅಂಬಾಡಿ ಅಂಜಿನಪ್ಪನವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳು ಮತ್ತು ಅವರ ಹಿಂದೆ ಬಂದಂತಹ ಸಂಬಂಧಿಕರಿಗೆ ಸೇರಿ ಒಟ್ಟು 200 ಜನಕ್ಕೆ ಪ್ರತಿದಿನ ಬೆಳಗ್ಗೆ 7.30ಕ್ಕೆ ರಾಗಿ ಗಂಜಿ ಮತ್ತು ಮಧ್ಯಾಹ್ನ ಮೊಸರನ್ನ ಜೊತೆಗೆ ಬಾಳೆಹಣ್ಣನ್ನು ಸಂಪೂರ್ಣ 2 ತಿಂಗಳ ಕಾಲ ಉಚಿತವಾಗಿ ವಿತರಿಸುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಗಂಗಾಮತ ಸಮಾಜದ ವಿಜಯನಗರ ಜಿಲ್ಲಾ ಅಧ್ಯಕ್ಷ ಅಂಬಾಡಿ ನಾಗರಾಜ್ ಹೇಳಿದರು.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಅಂಬಾಡಿ ಅಂಜಿನಪ್ಪನವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ನಮ್ಮ ತಂದೆ ಅಂಜಿನಪ್ಪನವರ 5ನೇ ವರ್ಷದ ಪುಣ್ಯಸ್ಮರಣೆಯವೇಳೆ ಉಚಿತ ಸಾಮೂಹಿಕ ವಿವಾಹಗಳು ಮತ್ತು ಉಚಿತ ನೇತ್ರಚಿಕಿತ್ಸಾ ಶಿಬಿರವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕು ಎಂದುಕೊಂಡಿದ್ದೆವು. ಆದರೆ ಕೊರೋನಾದ 2ನೇ ಅಲೆ ತೀವ್ರಸ್ವರೂಪವಾಗಿದ್ದು ರಾಜ್ಯಾಧ್ಯಂತ ಲಾಕ್‍ಡೌನ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಈ ಕಾರ್ಯಕ್ರಮಗಳನ್ನು ಕೈಬಿಡಬೇಕಾಯಿತು. ಅದರ ಬದಲಿಗೆ ಈ ಕೊರೋನಾ ಸಮಯದಲ್ಲಿ ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಲಾಕ್‍ಡೌನ್ ನಿಂದಾಗಿ ಊಟದ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿರುವುದನ್ನು ಮನಗಂಡು ಒಳರೋಗಿಗಳು ಮತ್ತು ಅವರ ಹಿಂದೆ ಬಂದಂತಹ ಸಂಬಂಧಿಕರಿಗೆ ಆಹಾರ ಸರಬರಾಜು ಮಾಡಬೇಕೆಂಬ ಸದುದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ.
ದೇಶಾಧ್ಯಂತ ಕೋರೋನಾ 2ನೇ ಅಲೆ ಆರ್ಭಟ ಜೋರಾಗಿದ್ದು ಸಾರ್ವಜನಿಕರು ಸುಖಾಸುಮ್ಮನೆ ಹೊರಗಡೆ ಓಡಾಡದೇ ಸದಾ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೈಗಳಿಗೆ ಸ್ಯಾನಿಟೈಸರ್ ಉಪಯೋಗಿಸುವುದರಿಂದ ಕೊರೋನಾ ವೈರಸ್‍ನ್ನು ದೂರವಿಡಬಹುದಾಗಿದೆ. ಜೀವನಿಕ್ಕಿಂತ ಜೀವ ಅಮೂಲ್ಯವಾದದ್ದು ಆದ್ದರಿಂದ ಈ ಎಲ್ಲಾ ಮುಂಜಾಗೃತೆಗಳನ್ನು ಶ್ರೀಸಾಮಾನ್ಯರು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ಸುಕ್ಷೇತ್ರ ನಂದಿಪುರದ ಮಹೇಶ್ವರಸ್ವಾಮೀಜಿ ಮಾತನಾಡಿ ತಾಲೂಕಿನಾಧ್ಯಂತ ಅಂಬಾಡಿ ಕುಟುಂಬದವರಿಗೆ ತನ್ನದೇ ಆದ ಒಂದು ಘನತೆ ಇದೆ. ಅದಕ್ಕೆ ತಕ್ಕಂತೆ ಅಂಬಾಡಿ ಅಂಜಿನಪ್ಪನವರ 5ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಪುತ್ರರು ಆಸ್ಪತ್ರೆಯ ರೋಗಿಗಳಿಗೆ ಉಚಿತ ಆರೋಗ್ಯಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಮತ್ತು ಧರ್ಮಸೂಕ್ತ ಕಾರ್ಯವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಉತ್ತಂಗಿ ಸಂಸ್ಥಾನ ಮಠದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಜಗದ್ಗುರು ಸೋಮಶಂಕರ ಸ್ವಾಮೀಜಿ ಮಾತನಾಡಿ ಪತೃಗಳ ಪುಣ್ಯಸ್ಮರಣೆಯನ್ನು ಸಮಾಜಮುಖಿ ಕಾರ್ಯವಾಗಿಸುವುದು ಇಂತಹ ಪುತ್ರರಿಂದ ಮಾತ್ರ ಸಾಧ್ಯ. ಅದರಲ್ಲೂ ರೋಗಿಗಳ ಸೇವೆ ಭಗವಂತನ ಸೇವೆಗೆ ಸಮಾನವಾದದ್ದು ಎಂದರು.
ಸಾನಿಧ್ಯ ವಹಿಸಿದ್ದ ಹಾಲಶಂಕರ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಸಮಾಜಕ್ಕೆ ನಾವು ಏನು ಕೊಡುತ್ತೇವೆಯೋ ಅದು ದುಪ್ಪಟ್ಟಾಗಿ ಮರಳಿ ನಮ್ಮ ಪುಣ್ಯದ ಖಾತೆಗೆ ಬರುತ್ತದೆ. ಆದ್ದರಿಂದ ಸಜ್ಜನರು ಸದಾ ಸಮಾಜಮುಖಿಗಳಾಗಿರುತ್ತಾರೆ. ಅಂತವರ ಸಾಲಿನಲ್ಲಿ ಅಂಬಾಡಿ ನಾಗರಾಜ್ ಕೂಡ ಒಬ್ಬರಾಗಿದ್ದಾರೆ. ಅವರ ತಂದೆಯ ಪುಣ್ಯ ಸ್ಮರಣೆಗೆ ಎಲ್ಲರೂ ಮೆಚ್ಚುವಂತಹ ಕಾರ್ಯವನ್ನು ಅವರು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಹಡಗಲಿ ಗವಿ ಮಠದ ಡಾ.ಹಿರೇಶಾಂತವೀರಸ್ವಾಮಿ, ಬೆಣ್ಣಿಹಳ್ಳಿಯ ಪಂಚಾಕ್ಷರಿ ಶಿವಾಚಾರ್ಯಸ್ವಾಮೀಜಿ,
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಶರಣಮ್ಮ, ತಾಲೂಕು ವೈದ್ಯಾಧಿಕಾರಿ ಶಿವರಾಜ್, ಸಿಎಂಒ ಡಾ.ಶಂಕರನಾಯ್ಕ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ, ಗಂಗಾಮತ ಸಮಾಜದ ತಾಲೂಕು ಕಾರ್ಯದರ್ಶಿ ಸರ್ದಾರ್ ಯಮನೂರ್, ಮೆಡಿಕಲ್‍ಶಾಪ್ ಬಸವರೆಡ್ಡಿ, ಮುತ್ಕೂರ್ ಸರ್ದಾರ್ ರಾಮಣ್ಣ, ಸರ್ದಾರ್ ಗೋವಿಂದಪ್ಪ, ಅಂಬಿಗರ ಮಂಜುನಾಥ, ರವಿಗೌಡ, ಬಿ.ಕೊಟ್ರೇಶ್, ಅಂಬಾಡಿ ಬಸಪ್ಪ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.