ಆಸ್ಪತ್ರೆ ದುರಂತ ಸರ್ಕಾರ ನಿರ್ಲಕ್ಷ್ಯ:ಡಿಕೆಶಿ ತರಾಟೆ

ಬೆಂಗಳೂರು, ಮೇ ೩- ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ದುರಂತ ಖಂಡನೀಯ. ಸರ್ಕಾರ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದುರಂತಕ್ಕೆ ಯಾರು ಜವಾಬ್ದಾರಿ, ಯಾರು ಹೊಣೆ ಹೊರುತ್ತಾರೆ ಎಂದು ಕಿಡಿಕಾರಿದರು.
ಸರ್ಕಾರ ಸಂಪೂರ್ಣವಾಗಿ ಸತ್ತಿದೆ. ಇವರ ಕೈಯಲ್ಲಿ ಆಡಳಿತ ಮಾಡಲು ಆಗುತ್ತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರುಗಳ ಮೇಲೂ ನಮಗೆ ನಂಬಿಕೆ, ವಿಶ್ವಾಸ ಇಲ್ಲ ಎಂದರು.
ಮುಖ್ಯಮಂತ್ರಿ ಮತ್ತು ಸಚಿವರುಗಳು ನಂಬಿಕೆ ಕಳೆದುಕೊಂಡಿರುವುದರಿಂದ ಇಂದು ನಾವು ಅಧಿಕಾರಿಗಳ ನೆಚ್ಚಿ ಕೂರಬೇಕಾಗಿದೆ. ಹಾಗಾಗಿ ಇಂದು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ವಾಸ್ತವಾಶಂಗಳನ್ನು ಜನರ ಮುಂದಿಡುವಂತೆ ಒತ್ತಾಯಿಸುತ್ತೇನೆ ಎಂದರು.
ಚಾಮರಾಜನಗರ ಜಿಲ್ಲೆ ಒಂದೇ ಅಲ್ಲ ಎಲ್ಲ ಜಿಲ್ಲೆಗಳಲ್ಲೂ ಸಮಸ್ಯೆ ಇದೆ. ಚಾಮರಾಜನಗರದಲ್ಲಿ ದುರಂತ ಸಂಭವಿಸಿರುವುದರಿಂದ ಎಲ್ಲವು ಬೆಳಕಿಗೆ ಬಂದಿದೆ. ಆರೋಗ್ಯ ಸಚಿವರು ಎಲ್ಲ ಸಚಿವರುಗಳು ಕೆಲಸಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸರಿಯಾದ ವ್ಯವಸ್ಥಿತವಾದ ಯೋಜನೆ ರೂಪಿಸಿ ಕೊರೊನಾ ತಡೆಯುವಂತೆ ಒತ್ತಾಯಿಸುವ ಜತೆಗೆ ಕೊರೊನಾದ ವಾಸ್ತವ ಸ್ಥಿತಿಗತಿಗಳನ್ನು ಜನರ ಮುಂದಿಡಿ ಎಂದು ಹೇಳುವುದಾಗಿಯೂ ಅವರು ಹೇಳಿದರು.