ಆಸ್ಪತ್ರೆಯ ಕಾಂಪೌಂಡ್ ಗೋಡೆ ಬಳಿಯಲ್ಲಿದ್ದ ಅಂಗಡಿ ತೆರವಿಗೆ ಕ್ರಮ

ಬೀದರ:ಡಿ.1: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ನವೆಂಬರ್ 29ರಂದು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ರಿಮ್ಸ್ ಆಸ್ಪತ್ರೆಯ ಹೊರಾಂಗಣದ ಸ್ಥಿತಿಗತಿಯನ್ನು ಕೂಡ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಕಾಂಪೌಂಡ್ ಗೋಡೆಯ ಹತ್ತಿರದಲ್ಲೇ ಇದ್ದ, ಬ್ರಿಮ್ಸ್ ಪ್ರವೇಶ ದ್ವಾರದ ಬಳಿಯಲ್ಲಿಯೇ ಇದ್ದ ಅಂಗಡಿಯ ಬಗ್ಗೆ ಜಿಲ್ಲಾಧಿಕಾರಿಗಳು ವಿಚಾರಿಸಿದರು. ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಜನರು ಬರುತ್ತಾರೆ. ಅವರಿಗೆ ಯಾವ ರೀತಿಯಿಂದಲೂ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ತಾವು ಆಸ್ಪತ್ರೆಯ ಗೇಟ್ ಬಳಿಯಲ್ಲಿಯೇ ಅಂಗಡಿ ಹಾಕಿರುತ್ತೀರಿ. ಅನುಮತಿ ಪಡೆದುಕೊಂಡೇ ಈ ಪ್ರದೇಶದಲ್ಲಿ ಅಂಗಡಿ ಹಾಕಿದ್ದೀರಾ? ಎಂದು ಅಂಗಡಿ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಕೇಳಿದರು.

ಆಸ್ಪತ್ರೆಯ ಈ ಪ್ರದೇಶದಲ್ಲಿ ಅಂಗಡಿ ಹಾಕಲು ಅನುಮತಿ ಪಡೆದಿರುತ್ತಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ನಗರಸಭೆ ಆಯುಕ್ತರು ಮತ್ತು ಇನ್ನೀತರ ಅಧಿಕಾರಿಗಳನ್ನು ಕರೆಯಿಸಿದರು. ಖುದ್ದು ತಾವೇ ಮುಂದೆ ನಿಂತು ಪರಿಶೀಲನೆಗೆ ಕ್ರಮ ವಹಿಸಿದರು. ಇದು ಆಸ್ಪತ್ರೆಗೆ ಹೊಂದಿಕೊಂಡ ಪ್ರದೇಶವಾಗಿದೆ. ಇಲ್ಲಿ ನಿಷೇಧಿತ ತಂಬಾಕಿನಂತಹ ಪದಾರ್ಥಗಳ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಈ ಬಗ್ಗೆ ಕೂಡ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು, ಸ್ಥಳಕ್ಕೆ ಡಿಎಸ್‍ಓ ಡಾ.ಕೃಷ್ಣಾ ರೆಡ್ಡಿ ಅವರನ್ನು ಕೂಡ ಕರೆಯಿಸಿ ಪರಿಶೀಲನೆ ನಡೆಸಲು ತಿಳಿಸಿದರು.

ಆಸ್ಪತ್ರೆಯ ಕಾಂಪೌಂಡ್‍ಗೆ ಅಂಗಡಿ ಹೊಂದಿಕೊಂಡಿದ್ದರಿಂದ ಜನರ ಆರೋಗ್ಯಕ್ಕೆ ತೊಂದರೆಯಾಗುವಂತಹ ನಿಷೇಧಿತ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಪರಿಶೀಲನೆ ವೇಳೆಯಲ್ಲೇನಾದರು ಕಂಡುಬಂದಲ್ಲಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತರು, ಇನ್ನೀತರ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ಅಂಗಡಿಯಲ್ಲಿ ಬಳಸುತ್ತಿದ್ದ ಸಿಲಿಂಡರ್ ಮತ್ತು ಇನ್ನೀತರ ವಸ್ತುಗಳನ್ನು ಪರಿಶೀಲನೆ ನಡೆಸಿದರು.

ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಜನರು ಬರುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ವೈದ್ಯರ ಆದ್ಯ ಕರ್ತವ್ಯವಾಗಿದೆ. ಆಸ್ಪತ್ರೆಯ ಸುತ್ತಲು ಆರೋಗ್ಯಕರ ರೀತಿಯ ಪರಿಸರ ಇರುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯ ಬಳಿಯಲ್ಲಿಯೇ ಈ ರೀತಿಯ ಅವ್ಯವಸ್ಥೆ ಕಂಡು ತಾವೇಕೆ ಸುಮ್ಮನಿದ್ದೀರಿ ಎಂದು ಜಿಲ್ಲಾಧಿಕಾರಿಗಳು ಬ್ರಿಮ್ಸ್ ನಿರ್ದೇಶಕರು ಮತ್ತು ವೈದ್ಯಕೀಯ ಅಧೀಕ್ಷಕರಿಗೆ ತರಾಟೆಗೆ ತೆಗೆದುಕೊಂಡರು. ಇನ್ಮೇಲೆ ಆಸ್ಪತ್ರೆಯ ಕಾಂಪೌಂಡ್ ಗೋಡೆಗೆ ಹೊಂದಿಕೊಂಡು ಅಂಗಡಿ ನಡೆಸಲು ಅವಕಾಶ ನೀಡಬಾರದು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.