ಆಸ್ಪತ್ರೆಗೆ ಬೀಗಜಡಿದ ಗ್ರಾಮಸ್ಥರು

ದಾವಣಗೆರೆ, ನ.17; ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಹಾಜರಾತಿಗೆ ಸಹಿ ಮಾಡಿ, ಸ್ಥಳದಲ್ಲಿ ಕರ್ತವ್ಯದಲ್ಲಿ ಹಾಜರಿಲ್ಲದ್ದರಿಂದ ರೋಗಿಗಳ ಪರದಾಡಿದ ಹಿನ್ನೆಲೆಯಲ್ಲಿ ಇಡೀ ಆಸ್ಪತ್ರೆಗೆ ಗ್ರಾಮಸ್ಥರು ಬೀಗ ಜಡಿದ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ನಡೆದಿದೆ.ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ದಾವಣಗೆರೆ ಮೊದಲ ಶಾಸಕಿ, ಪ್ರಥಮ ಮಹಿಳಾ ಶಾಸಕಿ ದಿವಂಗತ ಬಳ್ಳಾರಿ ಸಿದ್ದಪ್ಪನವರು ತಮ್ಮ ಜಮೀನು ಮಾರಿ, ಹೆಬ್ಬಾಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ಕಟ್ಟಿದ್ದ ಆಸ್ಪತ್ರೆಯಲ್ಲಿ ಇಂದುವೈದ್ಯರು, ಶುಶ್ರೂಷಕರು ಇತರೆ ಸಿಬ್ಬಂದಿ ಬೇಜವಾಬ್ಧಾರಿಯಿಂದ ರೋಸಿ ಆಸ್ಪತ್ರೆಗೆ ಬೀಗ ಜಡಿದಿದ್ದಾರೆ.ಹೆಬ್ಬಾಳ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತವಾಗಿದೆ. ಆದರೆ, ಅಲ್ಲಿನ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಸಮರ್ಪಕವಾಗಿ ರೋಗಿಗಳಿಗೆ ಸೇವೆ ಒದಗಿಸದ ಸ್ಥಿತಿ ಇದೆ. ನಿತ್ಯವೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವ ಸಿಬ್ಬಂದಿ ನೋಡ ನೋಡುತ್ತಲೇ ತಮ್ಮ ವಾಹನಗಳನ್ನೇರಿ ಮನೆಗೆ ಅಥವಾ ತಮ್ಮ ಸ್ವಂತ ಕೆಲಸಗಳಿಗೆ ತೆರಳುತ್ತಾರೆ. ಮತ್ತೆ ಕೆಲವರು 3-4 ದಿನಗಳ ಕರ್ತವ್ಯಕ್ಕೆ ಗೈರಾದರೂ ಸಹ ಸಹಿ ಒಂದೇ ದಿನ ಮಾಡಿ ಕೆಲಸ ಮಾಡಿದಂತೆ ತೋರಿಸಿಕೊಳ್ಳುತ್ತಾರೆಂಬುದು ಗ್ರಾಮಸ್ಥರ ದೂರು.ಯಾವುದೇ ವೈದ್ಯರು, ಶುಶ್ರೂಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಿಂದೆ ಸಣ್ಣ ಆಸ್ಪತ್ರೆ ಇದ್ದಾಗ ಕಾಯಂ ಶುಶ್ರೂಷಕರಿದ್ದರು. ಆದರೆ, ದೊಡ್ಡ ಆಸ್ಪತ್ರೆಯಾದರೂ ಕಾಯಂ ವೈದ್ಯರು, ಶುಶ್ರೂಷಕರು ಸಿಬ್ಬಂದಿ ಇಲ್ಲ. ಚಿಕಿತ್ಸೆ ಬಯಸಿ ಬಂದ ರೋಗಿಗಳು ಬಂದು ವೈದ್ಯರು, ಶುಶ್ರೂಷಕರು ಇಲ್ಲದ ವಿಚಾರ ಕೇಳಿ, ದಾವಣಗೆರೆ ಆಸ್ಪತ್ರೆಗಳಿಗೆ ಹೋಗುವುದೇ ಆಗಿದೆ. 21ನೇ ಶತಮಾನದಲ್ಲಿದ್ದರೂ ನಾವು ಸಾಮಾನ್ಯ ಜನರಿಗೆ ಒಳ್ಳೆಯ ಆರೋಗ್ಯ ಚಿಕಿತ್ಸೆ ಕೊಡಲಾಗದಿದ್ದರೆ ಸೇವೆ ಒದಗಿಸುವಲ್ಲಿ ವಿಫಲರಾಗಿದ್ದೇವೆಂದೇಅರ್ಥ. ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಸಮಸ್ಯೆ ಪರಿಹರಿಸಲಿ ಎಂದು ಗ್ರಾಪಂ ಸದಸ್ಯರು ಒತ್ತಾಯಿಸುತ್ತಾರೆ.ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಸರಿಪಡಿಸುವವರೆಗೂ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಶುರು ಮಾಡುತ್ತೇವೆ. ಇಂದು ಸಾಂಕೇತಿಕವಾಗಿ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಜಡಿದಿದ್ದು, ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲೂಕು ಆರೋಗ್ಯಾಽಕಾರಿಗಳು ಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು, ಶುಶ್ರೂಷಕರು, ಸಿಬ್ಬಂದಿಯನ್ನು ಒದಗಿಸಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ÷್ಯ ಬೇಡ. ಇಂದು ಆಸ್ಪತ್ರೆಗೆ ಸಾಂಕೇತಿಕವಾಗಿ ಬೀಗ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.