ಆಸ್ಪತ್ರೆಗೆ ಗೈರು : ವೈದ್ಯರ ಮಾನ್ಯತೆ ರದ್ದಿಗೆ ಶಿಫಾರಸ್ಸು – ಎಚ್ಚರಿಕೆ

ರಾಯಚೂರು.ಮೇ.೩೧- ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಆಸ್ಪತ್ರೆಗೆ ಗೈರಾಗುವ ವೈದ್ಯರ ಮಾನ್ಯತೆ ರದ್ದು ಪಡಿಸುವಂತೆ ಭಾರತೀಯ ವೈದ್ಯಕೀಯ ಮಂಡಳಿ ಮತ್ತು ರಾಜ್ಯ ವೈದ್ಯಕೀಯ ಇಲಾಖೆಗೆ ಶಿಫಾರಸ್ಸು ಮಾಡಬೇಕಾಗುತ್ತದೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ಎಚ್ಚರಿಸಿದರು.
ಅವರಿಂದು ದೇವದುರ್ಗ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ವೀಕ್ಷಿಸಿದರು. ಮುಖ್ಯ ವೈದ್ಯಕೀಯ ಅಧಿಕಾರಿಗೆ ಎಚ್ಚರಿಕೆ ನೀಡುತ್ತಾ, ಇಲ್ಲಿ ಪ್ರತಿನಿತ್ಯ ಯಾರು ಬರುತ್ತಾರೆ ಹೋಗುತ್ತಾರೆ ಎನ್ನುವ ಮಾಹಿತಿ ನೀಡಬೇಕೆಂದು ಹೇಳಿದರು. ಕೊರೊನಾ ಸಂಕಷ್ಟದಲ್ಲಿ ವೈದ್ಯರು ಆಸ್ಪತ್ರೆಗೆ ಬಾರದಿದ್ದರೇ ಅಂತಹವರ ಮಾನ್ಯತೆ ರದ್ದು ಮಾಡುವಂತೆ ಶಿಫಾರಸ್ಸು ಮಾಡಬೇಕಾಗುತ್ತದೆಂದು ಪ್ರತಿಕ್ರಿಯಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಭತ್ತ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಶೇ.೧೭ ಕ್ಕೂ ಅಧಿಕ ತೇವಾಂಶವಿದ್ದರೇ, ತಾಂತ್ರಿಕ ಸಮಸ್ಯೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತೊಗರಿ ಖರೀದಿಗೆ ಇರುವ ಆಸಕ್ತಿ ಭತ್ತ ಖರೀದಿಗೆ ರೈತರಿಂದ ವ್ಯಕ್ತಗೊಂಡಿಲ್ಲ. ರಸಗೊಬ್ಬರ ಸಂಗ್ರಹಿಸಿ, ತೃಪ್ತಿಕರವಾದ ಸಂಗ್ರಹವಿದೆಂದು ಹೇಳಿದರು. ಜಿಲ್ಲೆಯ ರೈಸ್ ಮಿಲ್‌ಗಳು ಭತ್ತ ಅರಿದ ನಂತರ ಅಕ್ಕಿ ನೀಡುವುದಕ್ಕೆ ಸಂಬಂಧಿಸಿ ಇರುವ ತಾಂತ್ರಿಕ ಸಮಸ್ಯೆ ಬಗ್ಗೆ ಮನವಿಯೊಂದನ್ನು ನೀಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಜಿಲ್ಲೆಯಲ್ಲಿ ೨೧ ಬ್ಲಾಕ್ ಫಂಗಸ್ ಪ್ರಕರಣಗಳಿವೆ. ಕೊರೊನಾ ಕುರಿತು ತಪಾಸಣೆ ಕಾರ್ಯ ಮತ್ತಷ್ಟು ತೀವ್ರಗೊಳಿಸಲಾಗುತ್ತದೆಂದು ಹೇಳಿದರು.