ಆಸ್ತಿ, ಹಣದ ಅಹಂ ತಲೆಗೆ ಹತ್ತಿದರೆ ಆಪತ್ತು

ಕೋಲಾರ,ಸೆ,೯- ಎಷ್ಟೇ ಅಧಿಕಾರ,ಹಣ,ಅಂತಸ್ತು ಸಿಕ್ಕರೂ ಅಹಂ ತಲೆಗೆ ಹತ್ತಬಾರದು, ಬಗ್ಗಿ ನಡೆದವರೇ ದೊಡ್ಡಮನುಷ್ಯರಾಗಲು ಸಾಧ್ಯ ಎಂದು ಅರಿತು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಿರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಗರದ ಕೋಗಿಲಹಳ್ಳಿಯ ಪಿ.ಎಂ.ಸುಬ್ರಹ್ಮಣ್ಯಂ, ಎಂ.ಎನ್.ನಂದಕುಮಾರಿ ದಂಪತಿಗಳ ಪುತ್ರ ಎಸ್.ಎನ್.ಯಶಸ್ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಪ್ರೌಢಶಾಲೆಯ ೧೩೦ ಮಕ್ಕಳಿಗೆ ಸ್ವೆಟರ್, ನೋಟ್‌ಪುಸ್ತಕ,ಲೇಖನಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಹುಟ್ಟುಹಬ್ಬಗಳನ್ನು ಹೋಟೆಲ್,ರೆಸಾರ್ಟ್‌ಗಳಲ್ಲಿ ಆಚರಿಸಿಕೊಂಡು ಸಂಭ್ರಮಿಸುವುದನ್ನು ಬಿಟ್ಟು, ಕೇಕ್ ಕತ್ತರಿಸದೇ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ನೆರವಾಗುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು.
ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಆದರೆ ಅಹಂ ಏಕೆ ಎಂದು ಪ್ರಶ್ನಿಸಿದ ಅವರು, ಮಕ್ಕಳ ನಗುನಗುತ ಇರಬೇಕು ಆದರ ಕಲಿಕೆಯಲ್ಲಿ ಮಾತ್ರ ಗಂಭೀರತೆ ಇರಲಿ, ಹುಟ್ಟುಹಬ್ಬವನ್ನು ಮಕ್ಕಳಿಗೆ ನೆರವಾಗುವ ಮೂಲಕ ಆಚರಿಸಿಕೊಳ್ಳುತ್ತಿರುವ ಯಶಸ್ ಐಪಿಎಸ್ ಮಾಡುವ ಗುರಿ ಮೆಚ್ಚುವಂತದ್ದಾಗಿದ್ದು, ಆತನ ಆಶಯ ಇಲ್ಲಿನ ಎಲ್ಲಾ ಮಕ್ಕಳ ಹಾರೈಕೆಯಿಂದ ನಿಜವಾಗಲಿ ಎಂದು ಆಶೀರ್ವದಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನಿಮಗೆ ಕಲಿಕೆಗೆ ಎಲ್ಲಾ ರೀತಿಯ ಸೌಲಭ್ಯಗಳಿವೆ, ನೀವು ಐಎಎಸ್.ಐಪಿಎಸ್,ಕೆಎಎಸ್ ಅಧಿಕಾರಿಗಳಾಗಿ ಸಾಧಕರಾಗಿ ಸಮಾಜ ಗುರುತಿಸುವಂತೆ ನಡೆದುಕೊಳ್ಳಿ ಎಂದು ತಿಳಿಸಿ ತಮ್ಮ ಬಾಲ್ಯದ ದಿನಗಳಲ್ಲಿ ಕಲಿಕೆಗೆ ಅವಕಾಶ ಇಲ್ಲದಿದ್ದರೂ ಕಷ್ಟಪಟ್ಟು ಓದಿದ್ದನ್ನು ಸ್ಮರಿಸಿಕೊಂಡರು.
ಕೋಗಿಲಹಳ್ಳಿ ಪಿಎಂ.ಸುಬ್ರಹ್ಮಣ್ಯಂ, ತಮ್ಮ ಮಗನ ಪರವಾಗಿ ೧೩೦ ಮಕ್ಕಳಿಗೆ ಸ್ಪೆಟರ್ ಕೊಡುಗೆಯಾಗಿ ನೀಡಿ, ತಮ್ಮ ಗುರುಗಳಾದ ಗುತ್ತಿಗೆದಾರ ನಾಗರಾಜ್ ಅವರ ಪತ್ನಿ ದಿವಂಗತ ಭಾರತಿ ಅವರ ನೆನಪಿನಲ್ಲಿ ಈ ಶಾಲೆಯ ಓರ್ವ ಬಡ ವಿದ್ಯಾರ್ಥಿಯನ್ನು ದತ್ತು ಪಡೆದು ಆತನ ಶಿಕ್ಷಣದ ಖರ್ಚು ಭರಿಸುವುದಾಗಿ ಘೋಷಿಸಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ ಮತ್ತಿತರರು ಯಶಸ್‌ಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ವಹಿಸಿದ್ದು, ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಶಾಂತ, ಗ್ರಾ.ಪಂ ಅಧ್ಯಕ್ಷ ರಾಜಣ್ಣ,ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯ ಎ.ಎಸ್.ನಂಜುಂಡಗೌಡ,ಗ್ರಾಮಸ್ಥರು ಹಾಜರಿದ್ದರು.