ಆಸ್ತಿ ವಿವಾದ: ಸೊಸೆಗೆ ಗಂಡಿಕ್ಕಿ ಹತ್ಯೆ ಯತ್ನ; ದೂರು ದಾಖಲು


ಮಡಿಕೇರಿ, ನ.೬- ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಾವ ಸೊಸೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ ೧೦ ಗಂಟೆ ಸಮಯದಲ್ಲಿ ಬೆಟ್ಟದಕೊಪ್ಪ ಗ್ರಾಮದ ಐಯ್ಯಪ್ಪ ಎಂಬುವವರು ಮಗನಾದ ಹೂವಯ್ಯನ ಪತ್ನಿ ತೀರ್ಥ ಅವರೊಂದಿಗೆ ರಸ್ತೆಯಲ್ಲಿ ದನ ಕಟ್ಟುವ ವಿಚಾರದಲ್ಲಿ ವಾಗ್ವಾದಕ್ಕಿಳಿದಿದ್ದಾರೆ. ಮಾತಿನ ಚಕಮಕಿ ವಿಪರೀತಕ್ಕೆ ಹೋದ ಪರಿಣಾಮ ಐಯ್ಯಪ್ಪ, ತೀರ್ಥ ಅವರ ಎಡಗೈ ಮತ್ತು ಎದೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಗುಂಡೇಟಿನಿಂದ ಗಾಯಗೊಂಡ ತೀರ್ಥ ಅವರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಐಯ್ಯಪ್ಪ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದು, ಮಗ ಹೂವಯ್ಯ ಆತನ ಪತ್ನಿ ತೀರ್ಥ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಹೂವಯ್ಯ ನೀಡಿದ ದೂರಿನ ಮೇರೆಗೆ ಆರೋಪಿ ಐಯ್ಯಪ್ಪ ಹಾಗೂ ಆತನ ಪತ್ನಿ ಮತ್ತು ಇಬ್ಬರು ಪುತ್ರಿಯರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.