ಆಸ್ತಿ ತೆರಿಗೆ ಹೆಚ್ಚಳಕ್ಕೆ ಎಚ್‍ಕೆಸಿಸಿಐ ವಿರೋಧ

ಕಲಬುರಗಿ ಏ 7: ಮಹಾನಗರ ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರು ನಗರದಲ್ಲಿ ಆಸ್ತಿ ತೆರಿಗೆಯನ್ನು ಏಪ್ರಿಲ್ 1 ರಿಂದ ಶೇ 15 ಕ್ಕೆ ಹೆಚ್ಚಿಸಲು ತೆಗೆದುಕೊಂಡ ನಿರ್ಧಾರವನ್ನು ಹೈದರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ( ಎಚ್‍ಕೆಸಿಸಿಐ) ವಿರೋಧಿಸಿದೆ.ಆಸ್ತಿ ತೆರಿಗೆ ಹೆಚ್ಚಳವನ್ನು ಜನ ವಿರೋಧಿ ಮತ್ತು ವಾಣಿಜ್ಯ ವಿರೋಧಿ ಎಂದು ಟೀಕಿಸಿದೆ.ಪಾಲಿಕೆಯಲ್ಲಿ ಈಗ ಚುನಾಯಿತ ಪ್ರತಿನಿಧಿಗಳು ಇಲ್ಲ.ಅವರ ಅನುಪಸ್ಥಿತಿಯಲಿ ್ಲಜನರ ಹಿತಾಸಕ್ತಿಗಳನ್ನು ನೋಡಿಕೊಳ್ಳಲು ಯಾರೂ ಇಲ್ಲ.ತೆರಿಗೆ ಹೆಚ್ಚಳ ನಿರ್ಧಾರವು ಜನಜೀವನದ ಮೇಲೆ ಬಹುದೊಡ್ಡ ಪರಿಣಾಮಗಳನ್ನು ಬೀರುತ್ತದೆ
ತೆರಿಗೆ ಪಾವತಿದಾರರು ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉದ್ಯಮಿಗಳು ಕೋವಿಡ್ -19 ಸಾಂಕ್ರಾಮಿಕದಿಂದ ತತ್ತರಿಸಿದ್ದಾರೆ.ಈ ಗಂಭೀರ ಪರಿಸ್ಥಿತಿಯಲ್ಲಿ, ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಕ್ರಮವು ಜನ ವಿರೋಧಿಯಾಗಿದೆ. ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಪಾಲಿಕೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಆದರೆ ಆಸ್ತಿ ತೆರಿಗೆ ಹೆಚ್ಚಳದ ಸಮಯ ಇದಲ್ಲ. ಕೋವಿಡ್ ಹೊಡೆತದಿಂದ ಆರ್ಥಿಕ ಪರಿಸ್ಥಿಯು ಚೇತರಿಸಿ ಮೊದಲಿನಂತೆ ಆಗುವವರೆಗೂ ಹೆಚ್ಚಳ ಕ್ರಮವನ್ನು ತಡೆ ಹಿಡಿಯುವಂತೆ ಎಚ್‍ಕೆಸಿಸಿಐ ಅಧ್ಯಕ್ಷ ಪ್ರಶಾಂತ್ ಮಾನಕರ್ ಮತ್ತು ಗೌರವ ಕಾರ್ಯದರ್ಶಿ ಶರಣಬಸಪ್ಪ ಪಪ್ಪಾ ಆಗ್ರಹಿಸಿದ್ದಾರೆ.