ಆಸ್ತಿ ತೆರಿಗೆ ವಂಚನೆ ಬಿಷಪ್ ಕಾಟನ್ ಸಂಸ್ಥೆ ವಿರುದ್ಧ ದೂರು


ಬೆಂಗಳೂರು, ಅ.೨೯- ನಗರದ ಪ್ರತಿಷ್ಠಿತ ಬಿಷಪ್ ಕಾಟನ್ ಶಿಕ್ಷಣ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸದೆ ವಂಚಿಸಿದ್ದು, ಈ ಬಗ್ಗೆ ನಿರ್ಲಕ್ಷ್ಯವಹಿಸಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ಅವರಿಗೆ ಆಸ್ತಿ ತೆರಿಗೆ ಬಾಕಿ ಸಂಬಂಧ ದೂರು ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಬಿಎಂಪಿ ಕಚೇರಿಯ ಹತ್ತಿರದಲ್ಲಿಯೇ ಇರುವ ಸಿಎಸ್‌ಐ ಚರ್ಚ್ ಹೆಸರಿನ ೨೭ ಎಕರೆ ಜಾಗದ ಪೈಕಿ ೪ ಎಕರೆಯಲ್ಲಿರುವ ಬಿಷಪ್ ಕಾಟನ್ ಪದವಿ ಕಾಲೇಜು ಮತ್ತು ಕಾನೂನು ಕಾಲೇಜು ಸಂಸ್ಥೆಯೂ ಪಾಲಿಕೆಗೆ ಕಳೆದ ೧೨ ವರ್ಷಗಳಿಂದಲೂ ಆಸ್ತಿ ತೆರಿಗೆಯನ್ನೇ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
೨೦೦೮-೦೯ ರಿಂದ ೨೦೧೬-೧೭ ರವರೆಗೆ ಕೇವಲ ಶೇ.೨೫ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ ಈ ಕಾಲೇಜು ಆಡಳಿತ ಮಂಡಳಿಯು ೨೦೧೭-೧೮ ರಿಂದ ಈವರೆವಿಗೆ ಸೇವಾ ತೆರಿಗೆಯನ್ನೂ ಸಹ ಪಾವತಿಸಿರುವುದಿಲ್ಲ. ಅಷ್ಟೇ ಅಲ್ಲದೆ, ೪ ಎಕರೆಯಲ್ಲಿ ಸುಮಾರು ೯೬,೦೭೦ ಚ.ಅಡಿಗಳಷ್ಟು ವಿಸ್ತೀರ್ಣದ ಕಾಲೇಜು ಕಟ್ಟಡವು ಇದ್ದು, ಇದನ್ನು ವಾಣಿಜ್ಯ ಕಟ್ಟಡವೆಂದು ಗುರುತಿಸಲಾಗಿದೆ ಎಂದರು.
ಈ ಕಾಲೇಜಿನ ೯೬,೦೭೦ ಚ. ಅಡಿಗಳಷ್ಟು ವಿಸ್ತೀರ್ಣದ ಒಟ್ಟು ನಿರ್ಮಿತ ಪ್ರದೇಶಕ್ಕೆ ಪಾಲಿಕೆಯು ವಾಣಿಜ್ಯ ಕಟ್ಟಡಗಳಿಗೆ ನಿಗದಿಪಡಿಸಿರುವಂತೆ ವಾರ್ಷಿಕವಾಗಿ ಪ್ರತಿಯೊಂದು ಚ. ಅಡಿ ವಿಸ್ತೀರ್ಣದ ಕಟ್ಟಡಕ್ಕೆ ೧೨.೫೦ ರೂ.ಗಳಂತೆ ಒಟ್ಟು ೩೧.೨೯ ಲಕ್ಷ ರೂ. ವಾರ್ಷಕ್ಕೆ ಪಾವತಿಸಬೇಕಿತ್ತು.
ಆದರೆ, ೨೦೦೮-೦೯ ರಿಂದ ೨೦೧೬-೧೭ ರವರೆಗೆ ಶೇ.೨೫ ರಷ್ಟು ಸೇವಾ ತೆರಿಗೆಯನ್ನು ಮಾತ್ರವೇ ಪಾವತಿಸಿರುವ ಈ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು, ಈವರೆಗೆ ಆಸ್ತಿ ತೆರಿಗೆಯನ್ನೇ ಪಾವತಿಸದೇ ಪಾಲಿಕೆಗೆ ಹತ್ತಾರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿರುತ್ತದೆ ಎಂದು ಆರೋಪಿಸಿದರು.
ರಿಯಾಯಿತಿ ಸರಿಯಲ್ಲ: ಸಾವಿರಾರು ವಿದ್ಯಾರ್ಥಿಗಳ ಸಂಖ್ಯೆ ಹೊಂದಿರುವ ಈ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು ಪ್ರತಿಯೊಬ್ಬ ವಿದ್ಯಾರ್ಥಿಯಿಂದ ವಾರ್ಷಿಕವಾಗಿ ಲಕ್ಷಾಂತರ ರೂ ಶುಲ್ಕವನ್ನು ವಸೂಲಿ ಮಾಡುತ್ತಿದ್ದರೂ “ಆಸ್ತಿ ತೆರಿಗೆ ರಿಯಾಯಿತಿ” ಪಡೆಯಲು ಮುಂದಾಗಿದ್ದಾರೆ.
ಆದರೆ, ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳಿಗೇ ಆಸ್ತಿ ತೆರಿಗೆ ರಿಯಾಯಿತಿ ನೀಡದ ಪಾಲಿಕೆಯು ಇಂತಹ ದೊಡ್ಡ ಮಟ್ಟದ ವಾಣಿಜ್ಯ ಉದ್ದೇಶಿತ ಕಾಲೇಜುಗಳಿಗೆ ಆಸ್ತಿ ತೆರಿಗೆ ರಿಯಾಯಿತಿ ನೀಡುವುದು ಸರಿಯಲ್ಲ.
ಅಲ್ಲದೆ, ಪ್ರಭಾವಶಾಲಿ ಶಿಕ್ಷಣ ಸಂಸ್ಥೆಯಾಗಿರುವ ಈ ಶಿಕ್ಷಣ ಸಂಸ್ಥೆಗೆ ಪಾಲಿಕೆಯು ಆಸ್ತಿ ತೆರಿಗೆ ರಿಯಾಯಿತಿ ನೀಡಿದರೆ, ಇನ್ನುಳಿದ ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ ಈ ರೀತಿಯ ರಿಯಾಯಿತಿ ಕೋರಿ ಅರ್ಜಿ ಸಲ್ಲಿಸಬಹುದು ಅಥವಾ ತಮ್ಮ ಶಿಕ್ಷಣ ಸಂಸ್ಥೆಗಳಿಗೂ ರಿಯಾಯಿತಿ ನೀಡುವಂತೆ ಪಾಲಿಕೆಗೆ ಆದೇಶಿಸುವಂತೆ ಕೋರಿ ನ್ಯಾಯಾಲಯಗಳ ಮೆಟ್ಟಿಲೇರಬಹುದಾಗಿರುತ್ತದೆ.
ಹೀಗಾಗಿ, ೨೦೦೮ ರಿಂದ ಈವರೆವಿಗೆ ಬಿಷಪ್ ಕಾಟನ್ ಶಿಕ್ಷಣ ಆಡಳಿತ ಮಂಡಳಿಯು ಪಾವತಿಸಬೇಕಿರುವ ಹತ್ತಾರು ಕೋಟಿ ರೂಪಾಯಿ ಆಸ್ತಿ ತೆರಿಗೆ ವಸೂಲಿ ಮಾಡಬೇಕು.
ಜತೆಗೆ, ಕರ್ತವ್ಯಲೋಪವೆಸಗಿರುವ ಸಂಬಂಧಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಬೇಕೆಂದು ರಮೇಶ್ ಒತ್ತಾಯಿಸಿದರು.