ಆಸ್ತಿ ತೆರಿಗೆ ರಿಯಾಯಿತಿಯ ಗಡುವು ವಿಸ್ತರಣೆ

ಹರಿಹರ.ಏ.೨೮; ನಗರಸಭೆಯ ಆಸ್ತಿ ತೆರಿಗೆ ರಿಯಾಯಿತಿಯ ಗಡುವು ವಿಸ್ತರಣೆಗೆ ಹಾಗೂ ಜಾರಿಯಲ್ಲಿರುವ ಆಸ್ತಿ ತೆರಿಗೆ ದರವನ್ನು ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿ ನಗರಸಭೆ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ನೀಲಕಂಠ ಸ್ನೇಹ ಬಳಗದ ಸದಸ್ಯರು ಮನವಿ ನೀಡಿದರು. ನಗರಸಭೆಗೆ ಆಗಮಿಸಿ ಪೌರಾಯುಕ್ತೆ ಎಸ್.ಲಕ್ಷ್ಮೀಗೆ ಮನವಿ ನೀಡಿದ ನಂತರ ಬಳಗದ ಎಚ್.ಕೆ.ಕೊಟ್ರಪ್ಪ ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿಯನ್ನು ನಗರಸಭೆ ಘೋಷಿಸಿದೆ.ಕೊರೊನಾ 2ನೇ ಅಲೆ, ಎರಡು ವಾರಗಳ ಕರ್ಫ್ಯೂ ಜನರ ದುಡಿಯುವ ಶಕ್ತಿಯನ್ನು ಕುಗ್ಗಿಸಿದೆ. ಬಹುತೇಕರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಜೂನ್‌ವರೆಗೆ ರಿಯಾಯಿತಿ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದರು.ನಗರದಲ್ಲಿ ನಿಗದಿಯಾಗಿರುವ ಆಸ್ತಿ ತೆರಿಗೆ ದರ ಅಕ್ಕಪಕ್ಕದ ದಾವಣಗೆರೆ, ರಾಣೆಬೆನ್ನೂರಿಗೆ ಹೋಲಿಸಿದರೆ ಅಧಿಕವಾಗಿದೆ. ಈ ಕುರಿತು ಸಂಬಂಧಿತ ಅಧೀಕಾರಿಗಳು ಪರಿಶೀಲನೆ ನಡೆಸಿ ಹೆಚ್ಚಾಗಿರುವ ಆಸ್ತಿ ತೆರಿಗೆ ದರವನ್ನು ಪರಿಷ್ಕರಿಸಬೇಕು. ಜನರನ್ನು ಹೆಚ್ಚುವರಿ ತೆರಿಗೆ ಹೊರೆಯಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿದರು.ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದರು. ಅರುನಾ ಕೊಟಗಿ, ಮಂಜುಳಾ ಆರ್.ಅಗಡಿ, ವೀರಣ್ಣ ಅಗಡಿ, ಗಂಗಾಧರ ಕೊಟಗಿ, ಟಿ.ಎಂ.ವೀರೇಂದ್ರ, ನಾಗರಾಜ್ ಇಂಡಿ, ಸುರೇಶಪ್ಪ, ನಾಗರಾಜ್ ಸುರಹೊನ್ನೆ, ಮಂಜುನಾಥ ಅಗಡಿ, ಶಂಕ್ರಪ್ಪ ಧೂಳಾ ಇತರರಿದ್ದರು.