
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.21: ನಗರದ ಹೊಸ ಬಸ್ ನಿಲ್ದಾಣದ ಎದುರಿನ ಆಸ್ತಿ ಖರೀದಿಯಲ್ಲಿ ತಮಗೆ ನಂಬಿಕೆ ದ್ರೋಹವೆಸಗಿ ಕೋಟ್ಯಂತರ ರೂ. ವಂಚಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಯುವ ಮುಖಂಡ ಮುಂಡ್ಲೂರು ಹನುಮ ಕಿಶೋರ್ ನಗರದ ಬ್ರೂಸ್ ಪೇಟೆ ಠಾಣೆಯಲ್ಲಿ
ಕರ್ನೂಲ್ ಜಿಲ್ಲೆಯ ದೇರೆಡ್ಡಿ ನಾಗಲಕ್ಷ್ಮಮ್ಮ (ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಅತ್ತೆ) ಮತ್ತು ಸ್ಥಳೀಯ ನಿವಾಸಿ ಮಾಜಿ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಬಿ. ಕೆ.ನಾಗರಾಜ್ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.
ಬಸ್ ನಿಲ್ದಾಣದ ಬಳಿಯ ಆಸ್ತಿಯನ್ನು 35ಕೋಟಿ ರೂಪಾಯಿಗೆ ಖರೀದಿ ಮಾಡಲು ಒಪ್ಪಿಕೊಂಡು, ಮುಂಗಡವಾಗಿ 20ಕೋಟಿ ರೂ. ಚೆಕ್ ನೀಡಿದ್ದರು. ಹೀಗಾಗಿ, ಆಸ್ತಿಯನ್ನು ಬಳ್ಳಾರಿ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಗ್ರಿಮೆಂಟ್ ಆಫ್ ನೋಂದಣಿ ಮಾಡಿಕೊಡಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಬ್ಯಾಂಕ್‌ಗೆ ಚೆಕ್ ಸಲ್ಲಿಸಿದಾಗ ಖಾತೆಗೆ ಹಣ ಜಮೆಯಾಗಲಿಲ್ಲ. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ‘ಪೇಮೆಂಟ್ ಸ್ಟಾಫ್ ಬೈ ಡ್ರಾಯ’ ಎಂದು ಮಾಹಿತಿ ನೀಡಿದ್ದರು. ಹಾಗಾಗಿ, ಮುಂಗಡವಾಗಿ ನೀಡಿದ ಚೆಕ್ ಹಣವನ್ನು ನೀಡದೆ ಮೋಸ, ವಂಚನೆ ಮಾಡಿರುವ ದೇರೆಡ್ಡಿ ನಾಗಲಕ್ಷ್ಮಮ್ಮ ಹಾಗೂ ಬಿ.ಕೆ.ನಾಗರಾಜ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹನುಮ ಕಿಶೋರ್ ಅವರು ನೀಡಿರುವ ದೂರಿನನ್ವಯ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ರು ಹಿಂಬರಹ ನೀಡಿದ್ದಾರೆ.