ಆಸ್ತಿ ಕಳಕೊಳ್ಳುವ ಭೀತಿಯಲ್ಲಿ ಸ್ಥಳೀಯರು

ಕಾಶ್ಮೀರ, ಸೆ.೮-ಅನೇಕ ವರ್ಷಗಳಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಶ್ರಯ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರದ ನೂರಾರು ಸ್ಥಳೀಯರು ತಮ್ಮ ಆಸ್ತಿಗಳನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾಗಿದೆ.
ಜಮ್ಮು ಮತ್ತು ಕಾಶ್ಮೀರದ ಆಡಳಿತ ಉಗ್ರರನ್ನು ಘೋಷಿತ ಅಪರಾಧಿಗಳೆಂದು ಘೋಷಿಸುವುದು ಮತ್ತು ಅವರ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಳ್ಳುವ ಕ್ರಮವನ್ನು ಆರಂಭಿಸಿದೆ.
ಈ ಕುರಿತು ಮಾಹಿತಿ ನೀಡಿದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕರಾದ ದಿಲ್ಬಾಗ್ ಸಿಂಗ್, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಜನರು ಉಗ್ರ ಚಟುವಟಿಕೆಯಲ್ಲಿ ತೊಡಗಿದ ನಂತರ ಇದೀಗ ಭಯೋತ್ಪಾದನೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ದೊಡಾ ಜಿಲ್ಲೆಯಲ್ಲಿ ಕ್ರಮವನ್ನು ಆರಂಭಿಸಿದ್ದೇವೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಶ್ರಯ ಪಡೆದಿದ್ದ ೧೬ ಸ್ಥಳೀಯರನ್ನು ಘೋಷಿತ ಅಪರಾಧಿಗಳೆಂದು ಘೋಷಣೆ ಮಾಡಿದ್ದೇವೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪೋಲಿಸ್‌ನ ಗುಪ್ತಚರ ವಿಭಾಗವು ಈಗಾಗಲೇ ೪,೨೦೦ ಕ್ಕೂ ಹೆಚ್ಚು ಜನರ ಪಟ್ಟಿಯನ್ನು ಸಿದ್ಧಪಡಿಸಿದೆ. ಇವರಲ್ಲಿ ಹೆಚ್ಚಿನವರು ೧೯೯೦ ರಿಂದ ಪಾಕ್ ಆಕ್ರಮಿತ ಪಾಕಿಸ್ತಾನದಲ್ಲಿದ್ದಾರೆ. ಅವರ ಆಸ್ತಿಗಳ ವಿವರಗಳನ್ನು ನೋಂದಣಿಗಳು ಮತ್ತು ಆದಾಯ ಇಲಾಖೆಯ ಇನ್‌ಸ್ಪೆಕ್ಟರ್-ಜನರಲ್ ಜೊತೆಗೆ ಹಂಚಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.