ಆಸ್ತಿತೆರಿಗೆ ಹೆಚ್ಚಳಕ್ಕೆ ಸಂಪುಟ ಅಸ್ತು

ಬೆಂಗಳೂರು, ಜ. ೧೩- ರಾಜ್ಯದ ನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಅವಕಾಶ ನೀಡುವ ಕರ್ನಾಟಕ ಮುನ್ಸಿಫಲ್ ಕಾಯ್ದೆಗೆ ತಿದ್ದುಪಡಿ ತರಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ತೀರ್ಮಾನಿಸಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಸ್ತಿ ತೆರಿಗೆ ಹೆಚ್ಚಳ ಸಂಬಂಧ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ತಿದ್ದುಪಡಿಯ ಪ್ರಕಾರ ಖಾಲಿ ನಿವೇಶನಗಳಿಗೂ ತೆರಿಗೆ ವಿಧಿಸಲಾಗುತ್ತದೆ. ಸಾವಿರ ಚದರ ಅಡಿಗಿಂತ ಕಡಿಮೆ ಇರುವ ನಿವೇಶನಗಳಿಗೆ ಆಸ್ತಿ ತೆರಿಗೆ ಇರುವುದಿಲ್ಲ. ಸಾವಿರ ಚದರಡಿಗಿಂತ ಹೆಚ್ಚಿರುವ ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ. ೦.೨ ಯಿಂದ ಶೇ. ೦.೫ಕ್ಕೆ ಹೆಚ್ಚಿಸಲಾಗುತ್ತದೆ. ಹಾಗೆಯೇ ಮನೆಗಳಿಗೆ ತೆರಿಗೆಯನ್ನು ಶೇ. ೧ ರಿಂದ ೧.೫ ರಷ್ಟು ಹೆಚ್ಚಿಸಲು ಈ ಕಾಯ್ದೆಯಲ್ಲಿ ಅವಕಾಶ ಇದೆ ಎಂದರು.
ಈ ಮೊದಲು ಆಸ್ತಿ ತೆರಿಗೆ ಲೆಕ್ಕಾಚಾರ ಹಾಕುವಾಗ ಆ ಆಸ್ತಿಯ ಮಾರ್ಗಸೂಚಿಯ ಶೇ. ೫೦ ರಷ್ಟು ಮೌಲ್ಯದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಅದನ್ನು ಕೈ ಬಿಟ್ಟು ಶೇ. ೨೫ ರಷ್ಟು ಮಾರುಕಟ್ಟೆ ದರದ ಮೇಲೆ ಆಸ್ತಿ ತೆರಿಗೆ ವಿಧಿಸಲು ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದರು.
ಖಾಲಿ ನಿವೇಶನಗಳ ಮಾರುಕಟ್ಟೆ ದರದ ಶೇ. ೨೫ ರಷ್ಟು ದರಕ್ಕೆ ಆಸ್ತಿ ತೆರಿಗೆ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.
ವಸತಿ ಯೋಜನೆ
ರಾಜ್ಯದಲ್ಲಿ ೧೦೦೩೪ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸುವ ೨ ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಮುಂದಿನ ೫ ವರ್ಷದಲ್ಲಿ ರಾಜ್ಯದ ವಿವಿಧೆಡೆ ಪೊಲೀಸರಿಗೆ ೨೦೩೪ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ೯೪ ಕೆರೆಗಳಿಗೆ ಎತ್ತಿನಹೊಳೆಯಿಂದ ನೀರು ಹರಿಸುವ ೨೦೦ ಕೋಟಿ ರೂ. ವೆಚ್ಚದ ಯೋಜನೆಗೂ ಅನುಮೋದನೆ ನೀಡಲಾಗಿದೆ ಎದರು.
ಕೋವಿಡ್ ಸಂದರ್ಭದಲ್ಲಿ ರೇಷ್ಮೆ ಧಾರಣೆ ಕುಸಿತದಿಂದ ರೇಷ್ಮೆ ಬೆಳೆಗಾರರಿಗೆ ಘೋಷಿಸಲಾಗಿದ್ದ ಸಹಾಯ ಧನ ವಿತರಿಸಲು ೧೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ ಎಂದು ಸಚಿವ ಮಾಧಸ್ವಾಮಿ ಹೇಳಿದರು.
ಚಿತ್ರದುರ್ಗ ಮುರುಘಾ ಮಠದಲ್ಲಿ ನಿರ್ಮಿಸಲಾಗುತ್ತಿರುವ ೩೨೫ ಅಡಿ ಎತ್ತರದ ಬಸವೇಶ್ವರರ ಕಂಚಿನ ಪ್ರತಿಮೆಗೆ ೨೦ ಕೋಟಿ ರೂ. ಅನುದಾನ ಒದಗಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ೧೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಈಗ ಮತ್ತೆ ೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಬೆಂಗಳೂರಿನ ಪುಷ್ಪ ಹರಾಜು ಕೇಂದ್ರದ ಸೊಸೈಟಿಯಲ್ಲಿ ಸರ್ಕಾರದ ಇ-ಟೆಂಡರ್ ಪಾಲನ್ನು ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಹಾಗೆಯೇ ಪುಷ್ಪ ಹರಾಜು ಕೇಂದ್ರದ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ಆದಿಚುಂಚನಗಿರಿ ಹಿರಿಯ ಶ್ರೀಗಳಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮ ಸ್ಥಳವಾದ ರಾಮನಗರ ಜಿಲ್ಲೆಯ ಬಾನಂದೂರು ಗ್ರಾಮದಲ್ಲಿ ೨೫ ಕೋಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರ ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಬೆಂಗಳೂರಿನ ನಾಗವಾರದಲ್ಲಿ ಕಾರ್ಲೆ ಸಂಸ್ಥೆಗೆ ೨೭ ಗುಂಟೆ ಜಮೀನನ್ನು ಮಾರುಕಟ್ಟೆ ದರದಲ್ಲಿ ನೀಡಲು ಸಂಪುಟ ಸಮ್ಮತಿ ಸೂಚಿಸಿದೆ ಎಂದು ಅವರು ಹೇಳಿದರು.
ದಾವಣಗೆರೆ ಜಿಲ್ಲೆಯ ಅನಗೋಡಿನಲ್ಲಿ ಜೆಎಂಎಂ ಕ್ರಷರ್ ಕಂಪೆನಿಗೆ ೩೦ ಎಕರೆ ಜಾಗವನ್ನು ೧೨ ವರ್ಷ ಗುತ್ತಿಗೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಐಟಿಐ ಅಭಿವೃದ್ಧಿ
ರಾಜ್ಯದ ೨೭೦ ಸರ್ಕಾರಿ ಐಟಿಐಗಳ ಪೈಕಿ ೧೫೦ ಐಟಿಐಗಳನ್ನು ಟಾಟಾ ಟೆಕ್ನಾಲಜಿ ಸಂಸ್ಥೆಯ ಸಹಯೋಗದಲ್ಲಿ ೪ ಸಾವಿರ ಕೋಟಿ ರೂ. ವೆಚ್ಚ ಮಾಡಿ ಐಟಿಐಗಳನ್ನು ಮೇಲ್ದರ್ಜೆಗೇರಿಸುತ್ತಿದ್ದು, ಇದರಲ್ಲಿ ಟಾಟಾ ಅವರ ಪಾಲು ಶೇ. ೮೮ ರಷ್ಟಿದ್ದು, ರಾಜ್ಯ ಸರ್ಕಾರ ಉಳಿದ ಪಾಲನ್ನು ಭರಿಸಬೇಕಿದ್ದು, ಇದಕ್ಕಾಗಿ ೧೫೦ ಕೋಟಿ ರೂ.ಗಳನ್ನು ಮೂಲಭೂತ ಸೌಕರ್ಯಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದರು.
ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಬಡ್ತಿ ಪಡೆಯಲು ಅನುವಾಗುವಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿ ನೀಡಿದೆ ಎಂದರು.
ಜಲಸಂಪನ್ಮೂಲ ಇಲಾಖೆಯ ಉನ್ನತ ಕೇಂದ್ರ ನಿರ್ವಹಣಾ ಆಡಳಿತ ಮಂಡಳಿಗಳನ್ನು ಪುನರ್ ರಚಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.