ಆಸ್ತಿಗಾಗಿ ವ್ಯಕ್ತಿಯ ಬರ್ಬರ ಕೊಲೆ

ಕೆ.ಆರ್.ಪೇಟೆ. ಜೂ.03: ಆಸ್ತಿಗಾಗಿ ವ್ಯಕ್ತಿಯನ್ನು ಕಲ್ಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಶವವನ್ನು ಮನೆಯ ಹಿಂಬದಿಗೆ ಬಿಸಾಕಿ ಹೋಗಿರುವ ಘಟನೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಕ್ಕನಹಳ್ಳಿ ಗ್ರಾಮದ ಮರಿಹುಚ್ಚಯ್ಯ ಎಂಬುವವರ ಮಗ ಕುಮಾರ(62) ಎಂಬುವವರೇ ಕೊಲೆಯಾಗಿರುವ ವ್ಯಕ್ತಿ. ಮಂಗಳವಾರ ರಾತ್ರಿ ಮನೆಯಲ್ಲಿಯೇ ಮಲಗಿದ್ದ ಕುಮಾರ ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆಯಲ್ಲಿ ಮನೆಯಿಂದ ಹೊರಗೆ ಹೋಗಿದ್ದಾನೆ ಈ ವೇಳೆಯಲ್ಲಿ ಅವನನ್ನು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಮನೆಯ ಹಿಂಭಾಗಕ್ಕೆ ತಂದು ಶವವನ್ನು ಬಿಸಾಕಿ ಹೋಗಿದ್ದಾರೆ.
ಬೆಳಗಿನ ವೇಳೆಯಲ್ಲಿ ಸ್ಥಳೀಯರು ಶವವನ್ನು ನೋಡಿ ಕಿಕ್ಕೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಪಿಎಸ್‍ಐ ನವೀನ್ ನೇತೃತ್ವದ ಪೊಲೀಸ್ ಸಿಬ್ಬಂಧಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಸಂಬಂಧ ಮೃತ ಕುಮಾರನ ಮೂವರು ಸಂಬಂಧಿಕರನ್ನು ತನಿಖೆಗಾಗಿ ಠಾಣೆಗೆ ಕರೆತಂದಿರುತ್ತಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.