ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲು ನಗರದಲ್ಲಿ ಕ್ಯಾಂಪ್ ಆಯೋಜನೆ

ಕಲಬುರಗಿ.ಆ.3:ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳ ಮಾಲೀಕರು ತಮ್ಮ ಸ್ವತ್ತುಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೆಳಕಂಡ ದಿನಾಂಕಗಳಂದು ಕಲಬುರಗಿ ನಗರದ ವಿವಿಧ ಸ್ಥಳಗಳಲ್ಲಿ ಕ್ಯಾಂಪ್‍ಗಳನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ರಾಜ್ಯಾದಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ತಂತ್ರಾಂಶದ ಮೂಲಕ ಖಾತೆಗಳನ್ನು ನೀಡಲು ಮತ್ತು ಆಸ್ತಿಗಳ ಮಾಲೀಕತ್ವ ಹಕ್ಕು ಬದಲಾವಣೆಯನ್ನು ಮಾಡಲು ಸರ್ಕಾರ ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನ ಇರುತ್ತದೆ. ಆದ್ದರಿಂದ ಮಹಾನಗರ ಪಾಲಿಕೆಯ ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಆಳವಡಿಸಲು ಕ್ಯಾಂಪ್‍ಗಳನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರಸ್ತುತಪಡಿಸಿ ಇ-ಆಸ್ತಿ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು.
ವಲಯವಾರು ಕ್ಯಾಂಪ್ ನಡೆಯುವ ಸ್ಥಳಗಳ ವಿವರ ಇಂತಿದೆ. ಮಹಾನಗರ ಪಾಲಿಕೆಯ ವಲಯ ಕಚೇರಿ-1ರ ವತಿಯಿಂದ: ಇದೇ ಆಗಸ್ಟ್ 4 ರಂದು ನಗರದ ಗೋದುತಾಯಿ ಕಾಲೋನಿಯ ಶಿವಮಂದಿರ, ಆಗಸ್ಟ್ 11 ರಂದು ವಿರೇಂದ್ರ ಪಾಟೀಲ್ ಬಡಾವಣೆಯ ಹನುಮಾನ ಮಂದಿರ, ಆಗಸ್ಟ್ 18 ರಂದು ಸಿದ್ದೇಶ್ವರ ಕಲ್ಯಾಣ ಮಂಟಪ ಹಾಗೂ ಆಗಸ್ಟ್ 25 ರಂದು ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಕ್ಯಾಂಪ್‍ನ್ನು ಏರ್ಪಡಿಸಲಾಗಿದೆ.
ಮಹಾನಗರ ಪಾಲಿಕೆಯ ವಲಯ ಕಚೇರಿ-2ರ ವತಿಯಿಂದ: ಇದೇ ಆಗಸ್ಟ್ 4 ರಂದು ಸಂಗಮೇಶ್ವರ ಕಾಲೋನಿಯ ಮಹಿಳಾ ಮಂಡಳ, ಆಗಸ್ಟ್ 11 ರಂದು ನಂದೇಶ್ವರ ಕಾಲೋನಿಯ ನಂದೇಶ್ವರ ದೇವಾಲಯ, ಆಗಸ್ಟ್ 18 ರಂದು ಕಲಬುರಗಿಯ ಶಾಂತಿನಗರ ಹಾಗೂ ಆಗಸ್ಟ್ 25 ರಂದು ಚಿಂಚೋಳಿ ಲೇಔಟ್‍ನ ಮಾಲ್ಗುಡಿ ಶಾಲೆಯಲ್ಲಿ ಕ್ಯಾಂಪ್‍ನ್ನು ಹಮ್ಮಿಕೊಳ್ಳಲಾಗಿದೆ.
ಮಹಾನಗರ ಪಾಲಿಕೆಯ ವಲಯ ಕಚೇರಿ-3 ರ ವತಿಯಿಂದ: ಇದೇ ಆಗಸ್ಟ್ 4 ರಂದು ಗಂಜ್ ಕಾಲೋನಿ ಅಂಬಾ ಭವಾನಿ ದೇವಸ್ಥಾನ, ಆಗಸ್ಟ್ 11 ರಂದು ಮಿಜುಗಿರಿಯ ಹಯಾತ್ ಫಂಕ್ಷನ್ ಹಾಲ್, ಆಗಸ್ಟ್ 18 ರಂದು ಮಕ್ತಾಂಪೂರ ಸರಾಫ ಬಜಾರದ ಶಂಕರಲಿಂಗ ಗುಡಿ ಹಾಗೂ ಆಗಸ್ಟ್ 25 ರಂದು ಸಂತ್ರಾಸವಾಡಿಯ ವೀರಭದ್ರೇಶ್ವರ ಮಂದಿರದಲ್ಲಿ ಕ್ಯಾಂಪ್ ಆಯೋಜಿಸಲಾಗಿದೆ.
ಇ-ಆಸ್ತಿ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ಖರೀದಿ ಅಥವಾ ದಾನ ಪತ್ರ/ಕಿಬಾಲಾ/ಹಕ್ಕುಪತ್ರ (ನೋಂದಾಯಿತ) ಝೆರಾಕ್ಸ್ ಪ್ರತಿ, ಕಟ್ಟಡವಿದ್ದಲ್ಲಿ, ಕಟ್ಟಡದ ಅನುಮತಿ ಪತ್ರ ಮತ್ತು ನಕ್ಷೆ, ಕಟ್ಟಡ/ಖುಲ್ಲಾ ನಿವೇಶನ, ಆ ಸ್ಥಳದ ಅಥವಾ ಅದರ ಮುಂಭಾಗದಲ್ಲಿ ಆಸ್ತಿಯ ಮಾಲೀಕರು ಸ್ವತಃ ನಿಂತು ಭಾವಚಿತ್ರ ತೆಗೆದುಕೊಂಡಿರುವ ಪ್ರತಿ, ಪಾಲಿಕೆಯಿಂದ ಪಡೆದ (ಹಳೆ ನಮೂನೆಯ) (ಹೊಸ ನಮೂನೆಯ) ಖಾತಾಗಳಿದ್ದರೆ ಇದರ ಪ್ರತಿ, ಆಸ್ತಿ ಮಾಲೀಕರ ಪಾಸ್‍ಪೋರ್ಟ್ ಸೈಜ್ ಫೋಟೊ, ಅನುಮೋದಿತ ವಿನ್ಯಾಸದ ಪ್ರತಿ, ಎನ್.ಎ. ಪ್ರತಿ, ಒಂದು ವೇಳೆ ಹಳೆಯ ಕಟ್ಟಡಗಳು/ಗ್ರಾಮ ಠಾಣಾದಲ್ಲಿ ಬರುವ ಕಟ್ಟಡಗಳು/ನಿವೇಶನಗಳು ಇದ್ದರೆ ಅವುಗಳಿಗೆ ಸಿ.ಟಿ.ಎಸ್. ದಾಖಲೆಗಳ ಪ್ರತಿ ಲಗತ್ತಿಸಬೇಕು. ಆಸ್ತಿ ಮಾಲೀಕರ ಗುರುತಿನ ಚೀಟಿ (ಐಡಿ), ಆಸ್ತಿ ಇರುವ ಜಿ.ಪಿ.ಎಸ್. ಲೋಕೇಶನ್ (ಲ್ಯಾಟಿ ಟ್ಯೂಡ್) ಮತ್ತು ಲಾಂಜಿಟ್ಯೂಡ್) ವಿವರ ಹಾಗೂ ಕರ ಪಾವತಿಸಿದ ರಸೀದಿಗಳ ದಾಖಲೆಗಳನ್ನು ಸಲ್ಲಿಸಬೇಕು.