ಆಸ್ಟ್ರೇಲಿಯಾ ಸರಣಿಯಿಂದ ರಾಹುಲ್ ಹೊರಕ್ಕೆ


ಸಿಡ್ನಿ, ಜ. ೫- ತರಬೇತಿ ಸಂದರ್ಭದಲ್ಲಿ ಎಡಗೈ ಮಣಿಕಟ್ಟು ಉಳುಕಿನಿಂದಾಗಿ ತೀವ್ರ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ.
ಗುರುವಾರದಿಂದ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಅಭ್ಯಾಸದಲ್ಲಿ ತೊಡಗಿದ್ದ ವೇಳೆ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಅಂತಿಮ ಪಂದ್ಯದಲ್ಲೂ ಆಡುವುದು ಅನುಮಾನವಾಗಿದೆ ಎಂದು ಬಿಸಿಸಿಐ ಹೇಳಿದೆ.
ಬಾರ್ಡರ್ -ಗವಾಸ್ಕರ್ ಸರಣಿಯ ೪ ಪಂದ್ಯಗಳಲ್ಲಿ ಈಗಾಗಲೇ ೨ ಪಂದ್ಯಗಳು ಮುಕ್ತಾಯಗೊಂಡಿದೆ. ಉಳಿದ ಎರಡು ಪಂದ್ಯಗಳಲ್ಲಿ ರಾಹುಲ್ ಆಡುವ ಸಾಧ್ಯತೆಯಿತ್ತು. ಆದರೆ ಗಾಯಾಳುವಾಗಿರುವುದರಿಂದ ಬಾಕಿ ಉಳಿದಿರುವ ಎರಡು ಪಂದ್ಯಗಳಿಂದಲೂ ದೂರ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. ರಾಹುಲ್ ಗುಣಮುಖರಾಗಲು ಮೂರು ವಾರಗಳ ಕಾಲ ಬೇಕಾಗುತ್ತದೆ ಎಂದು ವೈದ್ಯರು ಬಿಸಿಸಿಐಗೆ ವರದಿ ಸಲ್ಲಿಸಲಿದ್ದಾರೆ.
ರಾಹುಲ್ ಭಾರತಕ್ಕೆ ವಾಪಾಸ್ಸಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸಾ ಪುನರ್‌ವಸತಿ ಪಡೆಯಲಿದ್ದಾರೆ. ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೂ ರಾಹುಲ್ ಆಡುವುದು ಅನುಮಾನವಾಗಿದೆ.