ಆಸ್ಟ್ರೇಲಿಯಾ ವಿರುದ್ಧ ೨ನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಭಾರತ

India Ravi Jadeja (L) and Ajinkya Rahane (C) celebrate the dismissal of Australia's Matthew Wade on the third day of the second cricket Test match between Australia and India at the MCG in Melbourne on December 28, 2020. (Photo by WILLIAM WEST / AFP) / --IMAGE RESTRICTED TO EDITORIAL USE - STRICTLY NO COMMERCIAL USE--


ಮೆಲ್ಬೋರ್ನ್, ಡಿ. ೨೮- ಗವಾಸ್ಕರ್ -ಬಾರ್ಡರ್ ಟೆಸ್ಟ್ ಕ್ರಿಕೆಟ್ ಸರಣಿ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡನೆ ಇನ್ನಿಂಗ್ಸ್ ನಲ್ಲಿ ಭಾರತದ ಮಾರಕ ಬೌಲಿಂಗ್‌ಗೆ ತತ್ತರಿಸಿದ್ದು, ದಿನದಾಟದ ಅಂತ್ಯಕ್ಕೆ ೬ ವಿಕೆಟ್ ಕಳೆದುಕೊಂಡು ೧೩೩ ರನ್ ಗಳಿಸಿ, ಸಂಕಷ್ಟಕ್ಕೆ ಸಿಲುಕಿದೆ. ಆಸ್ಟ್ರೇಲಿಯಾ ಎರಡು ರನ್‌ಗಳ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲು ಹಾಕಿದೆ.ಮೊದಲ ಇನ್ನಿಂಗ್ಸ್‌ನಲ್ಲಿ ೧೩೧ ರನ್ ಗಳ ಮುನ್ನಡೆ ಸಾಧಿಸಿರುವ ಭಾರತ ೩ನೇ ದಿನದ ಆಟದಲ್ಲೂ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿರುವ ಭಾರತ ಬಾಕಿ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಪಡೆಯುವ ತವಕದಲ್ಲಿದ್ದು ಸರಣಿಯಲ್ಲಿ ೧-೧ ಸಮಬಲ ಸಾಧಿಸುವ ಹುಮ್ಮಸ್ಸುನಲ್ಲಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕಾಂಗರೂಗಳ ಮೇಲೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಒತ್ತಡ ಹೇರಿದರು. ವೇಗದ ಬೌಲರ್ ಉಮೇಶ್ ಯಾದವ್, ಜೋ ಬರ್ನ್ ನಾಲ್ಕು ರನ್ ಗಳಿಸಿ ಆಡುತ್ತಿದ್ದಾಗ ಅವರ ವಿಕೆಟ್ ಗಳಿಸಿ ಮೊದಲ ಆಘಾತ ನೀಡಿದರು. ಆದರೆ ಗಾಯಗೊಂಡು ಉಮೇಶ್ ಯಾದವ್ ಮೈದಾನದಿಂದ ನಿರ್ಗಮಿಸಿದರು.
ಬಳಿಕ ೨೮ ರನ್ ಗಳಿಸಿ ಆಡುತ್ತಿದ್ದ ಮಾರ್ನಸ್ ಲಾಬುಷೇನ್ ಅವರ ವಿಕೆಟ್ ಅನ್ನು ರವಿಚಂದ್ರ ಅಶ್ವಿನ್ ಪಡೆಯುವಲ್ಲಿ ಯಶ್ವಸಿಯಾದರು. ಸ್ಟೀವನ್ ಸ್ಮಿತ್ ಎಂಟು ರನ್ ಗಳಿಸಿ, ಬೂಮ್ರಾ ಬೌಲಿಂಗ್‌ನಲ್ಲಿ ಬೌಲ್ಡಾದರು. ಈ ಹಂತದಲ್ಲಿ ೧೭ರನ್ ಗಳಿಸಿ ಟ್ರಾವಿಸ್ ಹೆಡ್ ಮೊಹ್ಮದ್ ಸಿರಾಜ್ ಬಲೆಗೆ ಬಿದ್ದರು. ಈ ವೇಳೆ ಬೌಲಿಂಗ್ ಮಾಡಲು ಬಂದ ರವೀಂದ್ರ ಜಡೇಜಾ ಉತ್ತಮವಾಗಿ ಆಡುತ್ತಿದ್ದ ಮ್ಯಾಥ್ಯು ವೇಡ್ ೪೧ ರನ್ ಗಳಿಸಿದ್ದಾಗ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ನಾಯಕ ಟಿಮ್ ಪೆನ್ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು. ಈ ಸಮಯದಲ್ಲಿ ಆಸ್ಟ್ರೇಲಿಯಾ ೯೯ ರನ್‌ಗೆ ಆರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.
ಏಳನೇ ವಿಕೆಟ್‌ಗೆ ಜೊತೆಯಾಟದಲ್ಲಿ ಕ್ಯಾಮರೋನ್ ಗ್ರೀನ್ ೧೭ ಹಾಗೂ ಪ್ಯಾಟ್ ಕಮಿನ್ಸ್ ೧೫ ರನ್ ಗಳಿಸಿ ೩೪ ರನ್ ಗಳಿಸಿ, ಆಡುತ್ತಿದ್ದಾರೆ. ದಿನದಾಟ ಅಂತ್ಯಕ್ಕೆ ಆಸ್ಟ್ರೇಲಿಯಾ ಆರು ವಿಕೆಟ್ ನಷ್ಟಕ್ಕೆ ೧೩೩ ರನ್ ಗಳಿಸಿದೆ.
ಭಾರತದ ಪರ ಜಡೇಜಾ ಎರಡು ಬೂಮ್ರಾ, ಉಮೇಶ್ ಯಾದವ್, ಮೊಹ್ಮದ್ ಸಿರಾಜ್ ಹಾಗೂ ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ ೩೨೬ ರನ್‌ಗಳಿಗೆ ಸರ್ವಪತನ ಕಂಡಿತು. ರಹಾನೇ ೧೧೨ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ೫೭ ರನ್ ಬಾರಿಸುವ ಮೂಲಕ ೧೧೫. ೧ ಒವರ್‌ಗಳಲ್ಲಿ ೩೨೬ ರನ್ ಗಳಿಸಿತು.
ನಿನ್ನೆ ೨೭೭ ರನ್ ಗಳಿಗೆ ೫ ವಿಕೆಟ್ ಕಳೆದ ಕೊಂಡಿದ್ದ ಭಾರತ ಇಂದು ಆಟ ಮುಂದುವರಿಸಿ, ತಂಡದ ಮೊತ್ತವನ್ನು ೩೦೦ರ ಗಡಿ ದಾಟಿಸಿದರು.
ಭಾರತದ ಉಳಿದ ಬ್ಯಾಟ್ಸ್ ಮನ್‌ಗಳು ಹೆಚ್ಚು ಒತ್ತು ನಿಲ್ಲದೆ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಕೇವಲ ೩೨ ರನ್ ಗಳಿಸುವಷ್ಟರಲ್ಲೇ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ನಿರಾಸೆ ಮೂಡಿಸಿತು.
ಆಟಗಾರರ ನಡುವೆ ವಾಗ್ವಾದ
ಭಾರತ, ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಉಭಯ ಆಟಗಾರರ ನಡುವಣ ವಾಗ್ದಾದ ಭುಗಿಲೆದ್ದಿದೆ. ವಿಕೆಟ್ ಕೀಪರ್ ರಿಷಿಬ್ ಪಂತ್, ಆಸ್ಟ್ರೇಲಿಯಾ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ಪರಸ್ಪರ ಮಾತಿನ ಚಕಮಕಿ ತೊಡಗಿದ್ದು ಕಾವೇರಿದ ವಾತಾವರಣಕ್ಕೆ ಕಾರಣವಾಯಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಈ ಘಟನೆ ನಡೆದಿತ್ತು. ಬೂಮ್ರಾ ಬೌಲಿಂಗ್ ಮಾಡುವ ವೇಳೆ ವಿಕೆಟ್ ಕೀಪರ್ ಆಗಿದ್ದ ಪಂತ್ ಹೇ…. ಹೇ….ಹೇ… ಹೀಳಾಯಿಸುವ ರೀತಿಯಲ್ಲಿ ಜೋರಾಗಿ ನಕ್ಕಿದ್ದಾರೆ.
ಇದರಿಂದ ಬೇಸರಗೊಂಡ ವೇಡ್ ನಿಮ್ಮನ್ನು ನೀವೇ ಬಿಗ್ ಸ್ಕ್ರಿನ್ ನೋಡಿ ನಗುತ್ತಿರಾ ಎಂದು ಪ್ರತಿಕ್ರಿಯಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.