ಆಸ್ಟ್ರೇಲಿಯಾ ಪೊಲೀಸರಿಂದ ಭಾರತೀಯ ನಾಗರಿಕನ ಹತ್ಯೆ

ಸಿಡ್ನಿ, ಮಾ.೧- ಸ್ವಚ್ಛತಾ ಕೆಲಸಗಾರನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ ಬಳಿಕ ಚಾಕು ಹಿಡಿದು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಆಸ್ಟ್ರೇಲಿಯಾ ಪೊಲೀಸರು ಗುಂಡು ಹೊಡೆದು ಹತ್ಯೆ ನಡೆಸಿದ ಘಟನೆ ಸಿಡ್ನಿ ಹೊರವಲಯದ ಔಬರ್ನ್‌ನಲ್ಲಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ತಮಿಳುನಾಡು ಮೂಲದ ಮುಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್ (೩೨) ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಈತ ಮಾನಸಿಕ ಅಸ್ವಸ್ಥತೆ ಹೊಂದಿದ್ದನೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿನ ಭಾರತೀಯ ಕಾನ್ಸುಲೆಟ್ ಪ್ರಕಾರ ಈತ, ಬ್ರಿಡ್ಜಿಂಗ್ ವೀಸಾದಲ್ಲಿ ಲಿಬರ್ನ್‌ನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಘಟನೆಯು ಆತಂಕಕಾರಿ ಮತ್ತು ದುರದೃಷ್ಟಕರ ಎಂದು ಆಸ್ಟ್ರೇಲಿಯಾದಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ ಪ್ರತಿಕ್ರಿಯೆ ನೀಡಿದ್ದಾರೆ. ಮೂಲಗಳ ಪ್ರಕಾರ ಮಧ್ಯರಾತ್ರಿ ೧೨.೦೩ ಗಂಟೆಗೆ ಸಿಡ್ನಿಯ ಪಶ್ಚಿಮದಲ್ಲಿರುವ ಆಬರ್ನ್ ರೈಲು ನಿಲ್ದಾಣದಲ್ಲಿ ೨೮ ವರ್ಷದ ಸ್ವಚ್ಛತಾ ಸಿಬ್ಬಂದಿಗೆ ಅಹ್ಮದ್ ಚೂರಿಯಿಂದ ಇರಿದಿದ್ದಾನೆ. ಬಳಿಕ ಸುಮಾರು ಐದು ನಿಮಿಷಗಳ ಬಳಿಕ ಆಬರ್ನ್ ಪೊಲೀಸ್ ಠಾಣೆಗೆ ತೆರಳಿದ ಅಹ್ಮದ್ ಚೂರಿಯಿಂದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ. ಈ ವೇಳೆ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದ್ದು, ಇದರಲ್ಲಿ ಎರಡು ಗುಂಡುಗಳು ಅಹ್ಮದ್‌ನ ಎದೆಗೆ ತಾಗಿದೆ. ಅಲ್ಲದೆ ಓರ್ವ ಪೊಲೀಸ್ ಅಧಿಕಾರಿ ಟೀಸರ್ ಗನ್ ಮೂಲಕ ಅಹ್ಮದ್ ಮೇಲೆ ದಾಳಿ ನಡೆಸಿದ್ದ ಎನ್ನಲಾಗಿದೆ. ಕೂಡಲೇ ಆರೋಪಿ ಸೈಯದ್ ನನ್ನು ಘಟನಾ ಸ್ಥಳದಿಂದ ಅರೆವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿ ವೆಸ್ಟ್‌ಮೀಡ್ ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಇಂದು ಬೆಳಗಿನ ಜಾವ ೧:೩೦ ರ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.