ಸಿಡ್ನಿ (ಆಸ್ಟ್ರೇಲಿಯಾ), ಜು.೨೬- ಪಶ್ಚಿಮ ಆಸ್ಟ್ರೇಲಿಯಾದ ಕಡಲತೀರಕ್ಕೆ ಭಾರೀ ಪ್ರಮಾಣದಲ್ಲಿ ಬೃಹತ್ ಪೈಲೆಟ್ ತಿಮಿಂಗಿಲಗಳು ಬಂದು ಬೀಳುತ್ತಿದೆ. ಈ ವರೆಗೆ ಸುಮಾರು ೫೦ಕ್ಕೂ ಹೆಚ್ಚು ಭಾರೀ ಗಾತ್ರದ ತಿಮಿಂಗಿಲಗಳು ಮೃತಪಟ್ಟಿದ್ದು, ಬದುಕುಳಿದಿರುವ ೫೦ಕ್ಕೂ ಹೆಚ್ಚು ಸಂಖ್ಯೆಯ ಸಸ್ತನಿಗಳನ್ನು ಬದುಕುಳಿಸುವ ಪ್ರಯತ್ನ ಮುಂದುವರೆದಿದೆ.ಮಂಗಳವಾರ ಸ್ಥಳೀಯ ಕಾಲಮಾನದಂದು ಚೆಯ್ನೆಸ್ ಬೀಚ್‌ನ ಕರಾವಳಿಯಿಂದ ಸುಮಾರು ೧೦೦ ಮೀಟರ್‌ಗಳಷ್ಟು ದೂರದಲ್ಲಿ ತಿಮಿಂಗಿಲಗಳನ್ನು ಮೊದಲು ಗುರುತಿಸಲಾಯಿತು. ಸಹಜವಾಗಿಯೇ ಇದು ನೋಡುಗರಿಗೆ ಅಸಾಮಾನ್ಯ ರೀತಿಯಲ್ಲಿ ಕಂಡಿದೆ. ಬೃಹತ್ ತಿಮಿಂಗಿಲಗಳು ದಡಕ್ಕೆ ಅಪ್ಪಳಿಸುತ್ತಿದ್ದು, ೫೦ಕ್ಕೂ ಹೆಚ್ಚು ಮೃತಪಟ್ಟಿವೆ ಎನ್ನಲಾಗಿದೆ.
ಸದ್ಯ ಕೆಲವೊಂದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎನ್ನಲಾಗಿದ್ದು, ವನ್ಯಜೀವಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಭಾರೀ ಪ್ರಮಾಣದ ತಿಮಿಂಗಿಗಳು ದಡಕ್ಕೆ ಬಂದು ಅಪ್ಪಳಿಸುವುದು ವಿಶ್ವಾದ್ಯಂತ ಸಾಮಾನ್ಯ ಸಂಗತಿಯಾಗಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಇದರ ಪ್ರಮಾಣ ತುಸು ಅಧಿಕವೆಂದೇ ಹೇಳಲಾಗಿದೆ. ೨೦೨೨ರಲ್ಲಿ ತಸ್ಮೇನಿಯಾ ಕರಾವಳಿ ಪ್ರದೇಶಕ್ಕೆ ೨೩೦ಕ್ಕೂ ಹೆಚ್ಚು ತಿಮಿಂಗಿಲಗಳು ದಡಕ್ಕೆ ಬಂದು ಬಿದ್ದಿದ್ದವು. ಅಲ್ಲದೆ ೨೦೧೮ರಲ್ಲಿ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ೧೫೦ಕ್ಕೂ ಹೆಚ್ಚಿನ ತಿಮಿಂಗಿಲಗಳು ದಡಕ್ಕೆ ಬಂದಿದ್ದವು.