ಆಸ್ಟ್ರೇಲಿಯನ್ ಓಪನ್:ಮರ್ರೆ ಮುನ್ನಡೆ

ಮೆಲ್ಬೊರ್ನ್,ಜ.೨೦-ಮೊದಲೆರಡು ಸುತ್ತುಗಳಲ್ಲಿ ಸೋಲಿನ ಹೊರತಾಗಿಯೂ ಬಳಿಕ ಅತ್ಯಮೋಘ ರೀತಿಯಲ್ಲಿ ಪ್ರದರ್ಶನ ನೀಡುವ ಮೂಲಕ ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಬ್ರಿಟನ್‌ನ ಆಂಡಿ ಮರ್ರೆ ಗೆಲುವು ಸಾಧಿಸುವ ಮೂಲಕ ಮೂರನೇ ಸುತ್ತಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ತಡರಾತ್ರಿ ಆರಂಭವಾದ ಪಂದ್ಯವು ಸುದೀರ್ಘವಾಗಿ ನಡೆದು, ಮುಂಜಾನೆ ವರೆಗೂ ಮುಂದುವರೆದಿದ್ದು, ಸಹಜವಾಗಿಯೇ ಮರ್ರೆ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಟೆನಿಸ್ ಇತಿಹಾಸದಲ್ಲಿ ಅತ್ಯಂತ ತಡವಾಗಿ ಅಂತ್ಯಗೊಂಡ ಪಂದ್ಯಗಳಲ್ಲಿ ಒಂದೆಂಬ ಹೆಸರಿಗೆ ಸದ್ಯ ಇದು ಪಾತ್ರವಾಗಿದೆ.
ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಅಂತ್ಯಗೊಂಡ ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಥನಾಸಿ ಕೊಕ್ಕಿನಾಕಿಸ್ ವಿರುದ್ಧ ೪-೬ ೬-೭(೪) ೭-೬(೫) ೬-೩ ೭-೫ರ ಸುದೀರ್ಘ ಹೋರಾಟಕಾರಿ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ೩೫ರ ಹರೆಯದ ಮರ್ರೆ ಇನ್ನೂ ತನ್ನಲ್ಲಿ ಆಡುವ ಕ್ಷಮತೆ ಇದೆ ಎಂದು ತೋರಿಸಿಕೊಟ್ಟರು. ಪಂದ್ಯದ ಒಂದು ಹಂತದಲ್ಲಿ ಮರ್ರೆ ೪-೬ ಹಾಗೂ ೬-೭ (೪)ರ ಅಂತರದಲ್ಲಿ ಹಿನ್ನಡೆ ಕಂಡಿದ್ದು, ಬಹುತೇಕ ಸೋಲಿನ ಬಾಗಿಲಲ್ಲಿ ನಿಂತಿದ್ದರು. ಅದೂ ಅಲ್ಲದೆ ಮೂರನೇ ಸುತ್ತಿನಲ್ಲೂ ಪಂದ್ಯವನ್ನು ಬಹುತೇಕ ಕಳೆದುಕೊಳ್ಳುವ ಭೀತಿಯಲ್ಲಿದ್ದರೂ ಎದೆಗುಂದದ ಮರ್ರೆ ಅಮೋಘ ರೀತಿಯಲ್ಲಿ ತಿರುಗಿಬಿದ್ದು, ಪ್ರದರ್ಶನ ನೀಡಿದರು. ತವರಿನ ಭಾರೀ ಸಂಖ್ಯೆಯ ಅಭಿಮಾನಿಗಳು ಥನಾಸಿಯನ್ನು ಬೆಂಬಲಿಸಿ, ಚೀರಾಟ ನಡೆಸಿದರೂ ಅತ್ತ ಎದೆಗುಂದದ ಮರ್ರೆ ತನ್ನ ಪ್ರತಿಭೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದರು. ಮೂರನೇ ಸುತ್ತಿನ ಪ್ರಯಾಸಕರ ಗೆಲುವು ಸಾಧಿಸಿದರೂ ಅಂತಿಮ ಎರಡೂ ಸುತ್ತಿನಲ್ಲೂ ಸುಲಭ ಅಂತರದಲ್ಲಿ ಜಯ ಸಾಧಿಸುವ ಮೂಲಕ ಮರ್ರೆ ಪಂದ್ಯವನ್ನು ಗೆದ್ದುಕೊಂಡು, ಮೂರನೇ ಸುತ್ತಿಗೆ ಎಂಟ್ರಿ ಕೊಟ್ಟರು.
೫:೪೫ ಗಂಟೆಗಳ ಕಾಲ ನಡೆದ ಪಂದ್ಯ!
ಸದ್ಯ ಈ ಪಂದ್ಯದ ಬಗ್ಗೆ ಇದೀಗ ವಿಶ್ವ ಕ್ರೀಡಾ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ರಾತ್ರಿ ೧೦:೨೦ ಗಂಟೆಗೆ ಆರಂಭವಾದ ಪಂದ್ಯವು ಬರೊಬ್ಬರಿ ಮುಂಜಾನೆ ನಾಲ್ಕು ಗಂಟೆವರೆಗೂ ಮುಂದುವರೆದಿದ್ದು, ಆಟಗಾರರ ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಸವಾಲು ಒಡ್ಡಿತ್ತು. ಬರೊಬ್ಬರಿ ೫:೪೫ ಗಂಟೆಗಳ ಕಾಲ ನಡೆದ ಪಂದ್ಯ ಅಂತಿಮ ಹಂತದಲ್ಲಿ ತೀವ್ರ ರೀತಿಯಲ್ಲಿ ಬಸವಳಿದ ಮರ್ರೆ ಅಧಿಕಾರಿಗಳ ವಿರುದ್ಧ ಹರಿಹಾಯುತ್ತಾ ಆಡುತ್ತಿರುವುದು ಕಂಡುಬಂತು. ಅಲ್ಲದೆ ಇತರೆ ಮಾಜಿ ಆಟಗಾರರು ಕೂಡ ಇದೀಗ ಪಂದ್ಯದ ವೇಳಾಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಇದು ೩೫ರ ಹರೆಯದ ಮರ್ರೆ ಟೆನಿಸ್ ಜೀವನದ ಅತ್ಯಂತ ಸುಧೀರ್ಘ ಪಂದ್ಯ ಎಂಬುದಕ್ಕೆ ಪಾತ್ರವಾಗಿದೆ.