ಆಸೀಸ್‌ಗೆ ಭಾರತ ತಿರುಗೇಟು; ಎರಡನೇ ಟೆಸ್ಟ್‌ನಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ

India's Shubman Gill (L) congratulates team's captain Ajinkya Rahane after victory in the second cricket Test match between Australia and India at the MCG in Melbourne on December 29, 2020. (Photo by WILLIAM WEST / AFP) / --IMAGE RESTRICTED TO EDITORIAL USE - NO COMMERCIAL USE--

ಮೆಲ್ಬೋರ್ನ್, ಡಿ. ೨೯-ಗವಾಸ್ಕರ್-ಬಾರ್ಡರ್ ಟೆಸ್ಟ್ ಕ್ರಿಕೆಟ್‌ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಎಂಟು ವಿಕೆಟ್‌ಗಳ ಭರ್ಜರಿ ಜಯಗಳಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ೩೬ ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡು ಭಾರೀ ಮುಖಭಂಗಕ್ಕೊಳಗಾಗಿದ್ದ ಭಾರತ, ಕಾಂಗರೂಗಳಿಗೆ ತಿರುಗೇಟು ನೀಡಿದೆ.
ಸರಣಿಯ ಎರಡು ಪಂದ್ಯಗಳು ಬಾಕಿ ಉಳಿದಿದ್ದ, ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿ ಅನುಪ ಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ಸಾರಥ್ಯದ ತಂಡ ಸಂಘಟಿತ ಹೋರಾಟದ ಮೂಲಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇಂದು ನಾಲ್ಕನೇ ದಿನದಾಟದಲ್ಲಿ ಅಲ್ಪಮೊತ್ತದ 70 ರನ್‌ಗಳ ಗೆಲುವಿನ ಗುರಿ ಬೆನ್ನಹತ್ತಿದ್ದ ಭಾರತಕ್ಕೆ, ಆಸ್ಟ್ರೇಲಿಯಾ ಆರಂಭದಲ್ಲಿ ಮಯಾಂಕ್ ಅಗರ್‌ವಾಲ್ ವಿಕೆಟ್ ಕಬಳಿಸುವ ಮೂಲಕ ಆಘಾತ ನೀಡಿತು.
ಅಗರ್‌ವಾಲ್ ಕೇವಲ ಐದು ರನ್‌ಗಳಿಸಿ ನಿರ್ಗಮಿಸಿದರು. ಮೊದಲೆರಡು ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲೂ ಅಗರ್‌ವಾಲ್ ಕಳಪೆ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇದಾದ ಬಳಿಕ ಚೇತೇಶ್ವರ ಪೂಜಾರ ಕೇವಲ ಮೂರು ರನ್ ಗಳಿಸಿ ಔಟಾದಾಗ ತಂಡ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಅಡಿಲೇಡ್‌ನಲ್ಲಿ 36 ರನ್‌ಗಳಿಗೆ ಸರ್ವಪತನ ಮರುಕಳಿಸಬಹುದೇ ಎಂಬ ಆತಂಕ ಎದುರಾಗಿತ್ತು. ಆದರೆ ನಾಯಕ ರಹಾನೆ ಮತ್ತು ಶುಭ್‌ಮನ್ ಗಿಲ್ ಮುರಿಯದ ಮೂರನೇ ವಿಕೆಟ್ ಜತೆಯಾಟದಲ್ಲಿ 51 ರನ್‌ಗಳಿಸಿದ ಭಾರತಕ್ಕೆ ಗೆಲುವಿನ ಮಾಲೆ ತೊಡಿಸಿದರು. ಗಿಲ್ 35 ಹಾಗೂ ರಹಾನೆ 27 ರನ್‌ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 200ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತದ ಗೆಲುವಿಗೆ 70 ರನ್‌ಗಳ ಗುರಿ ನೀಡಿತು.
ಕ್ಯಾಮರೂನ್ ಗ್ರೀನ್ ಹಾಗೂ ಪೀಟ್ ಕ್ಯಾಮಿನ್ಸ್ ಏಳನೇ ವಿಕೆಟ್ ಜತೆಯಾಟದಲ್ಲಿ 57ರನ್ ಸೇರಿಸಿದರು. ಅಂತಿಮವಾಗಿ ಜಸ್ಪ್ರೀತ್ ಬೂಮ್ರಾ ಈ ಜೋಡಿಯನ್ನು ಮುರಿಯುವಲ್ಲಿ ಸಫಲ ರಾದರು. 103 ಎಸೆತಗಳನ್ನು ಎದುರಿಸಿದ ಕಮಿನ್ಸ್ 22 ರನ್‌ಗಳಿಸಿ ನಿರ್ಗಮಿಸಿದರು.
ನಥನ್ ಲಿಯನ್ 3, ನಾಥನ್ ಹೇಜಲ್‌ವುಡ್ 10 ರನ್ ಗಳಿಸಿದರೆ, ಮಿಚೆಲ್ ಸ್ಟಾರ್ಕ್ 14 ರನ್‌ಗಳಿಸಿ ಅಜೇಯರಾಗುಳಿದರು.
ಭಾರತದ ಪರ ಮೊಹಮ್ಮದ್ ಸಿರಾಜ್ ೩,ಬೂಮ್ರಾ, ಅಶ್ವಿನ್ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ಆಸ್ಟ್ರೇಲಿಯಾ ಕುಸಿತಕ್ಕೆ ಪ್ರಮುಖ ಪಾತ್ರ ವಹಿಸಿದರು.
ಈ ಮೊದಲು ಭಾರತದ ಮಾರಕ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾವನ್ನು 195 ರನ್‌ಗಳಿಗೆ ಕಟ್ಟಿ ಹಾಕಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯಾ ರಹಾನೆ ಆಕರ್ಷಕ ಶತಕ ನೆರವಿನಿಂದ 326 ರನ್‌ಗಳಿಸಿ 131 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿತ್ತು.

ನಾಯಕನಾಗಿ ಗೆಲುವು
ಅಂಜಿಕ್ಯಾ ರಹಾನೆ ನಾಯಕತ್ವ ವಹಿಸಿಕೊಂಡ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ.
ಎರಡನೇ ಪಂದ್ಯದಲ್ಲಿ 122ರನ್‌ಗಳನ್ನು ಬಾರಿಸಿ ಎರಡನೇ ಇನ್ನಿಂಗ್ಸ್‌ನಲ್ಲೂ ಶುಭ್‌ಮನ್ ಗಿಲ್ ಜತೆಗೂಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ರಹಾನೆ ಪ್ರಮುಖ ಪಾತ್ರ ವಹಿಸಿದ್ದರು.

ಸ್ಕೋರ್ ವಿವರ
ಭಾರತ
ಮೊದಲ ಇನ್ನಿಂಗ್ಸ್ 326
ಎರಡನೇ ಇನ್ನಿಂಗ್ಸ್ 2 ವಿಕೆಟ್ ನಷ್ಟಕ್ಕೆ 70 ರನ್
ಆಸ್ಟ್ರೇಲಿಯಾ
ಮೊದಲ ಇನ್ನಿಂಗ್ಸ್ 195
ಎರಡನೇ ಇನ್ನಿಂಗ್ಸ್ 200